ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಬಹುಕೋಟಿ ಭೂ ಹಗರಣ ನಡೆದಿದ್ದು, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ತಂಡ ರಚಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಗಿದೆ ಎಂದು ಶಾಸಕ ಕೆ. ಹರೀಶ್ ಗೌಡ ಹೇಳಿದರು.
ಮುಡಾ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಟ್ಟಗಳ್ಳಿಯಲ್ಲಿ ಮುಡಾಗೆ ಸೇರಿದ 27 ಎಕರೆ ಜಾಗವು ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡದೆ ಖಾಸಗಿಯವರ ಪಾಲಾಗಿದೆ. ಮುಡಾದಿಂದ ನ್ಯಾಯಾಲಯಕ್ಕೆ ಏತಕ್ಕೆ ಸರಿಯಾಗಿ ದಾಖಲೆಗಳು ಸಲ್ಲಿಕೆಯಾಗಿಲ್ಲ? ವಕೀಲರು ಏತಕ್ಕೆ ಸರಿಯಾಗಿ ವಾದ ಮಂಡಿಸಲಿಲ್ಲ? ಯಾರ ಹಿತ ಕಾಯಲು ಈ ರೀತಿಯ ನಿರ್ಲಕ್ಷೃವನ್ನು ಮುಡಾ ಕೈಗೊಂಡಿದೆ ಎಂದು ಸಭೆಯಲ್ಲಿ ಪ್ರಶ್ನಿಸಿದ್ದೇವೆ ಎಂದರು.
ಮುಡಾದ 27 ಎಕರೆ ಜಾಗ ಖಾಸಗಿಯವರ ಪಾಲಾಗಿರುವ ವಿಚಾರದಲ್ಲಿ ಮೇಲ್ನೋಟಕ್ಕೆ ಹಗರಣ ನಡೆದಿರುವಂತೆ ಕಂಡುಬಂದಿದೆ. ಇದು 400 ಕೋಟಿ ರೂ.ಬೆಲೆ ಬಾಳುವ ಆಸ್ತಿಯಾಗಿದ್ದು, ಇಷ್ಟೊಂದು ದೊಡ್ಡ ಮೊತ್ತದ ಆಸ್ತಿ ಖಾಸಗಿಯವರ ಪಾಲಾಗಿದ್ದು ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಈ ಕುರಿತು ನಿವೃತ್ತ ನ್ಯಾಯಮೂರ್ತಿ ಮೂಲಕ ಅಥವಾ ವಿಶೇಷ ತನಿಖಾ ತಂಡ (ಎಸ್‌ಐಟಿ) ಮೂಲಕ ತನಿಖೆ ನಡೆಸುವಂತೆ ಸಭೆಯಲ್ಲಿ ಒತ್ತಾಯಿಸಿದ್ದು, ಈ ಕುರಿತು ಸರ್ಕಾರದ ಗಮನವನ್ನು ಸಹ ಸೆಳೆಯಲಾಗುವುದು ಎಂದು ಹೇಳಿದರು.
ಈ ಜಾಗವನ್ನು ಮರಳಿ ಮುಡಾ ವಶಕ್ಕೆ ಪಡೆಯಲು ಕಾನೂನು ರೀತಿಯ ಹೋರಾಟ ನಡೆಸಲಾಗುವುದು. ಈ ವಿಚಾರದಲ್ಲಿ ಎಷ್ಟೇ ಸಮಸ್ಯೆ, ಸವಾಲುಗಳು ಎದುರಾದರೂ ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ಜಾಗವನ್ನು ಮುಡಾಕ್ಕೆ ವಾಪಾಸ್ ಪಡೆಯುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದರು.
ಪ್ರಾಧಿಕಾರಕ್ಕೆ ವಕೀಲರುಗಳನ್ನು ನೇಮಕ ಮಾಡುವ ಸಂದರ್ಭ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದ್ದೇವೆ. ಹಾಲಿ ಇರುವ ವಕೀಲರುಗಳ ಸೇವೆಯನ್ನು ಮುಂದುವರೆಸುವ ಸಂದರ್ಭ ಅವರು ಮುಡಾಕ್ಕೆ ಎಷ್ಟು ಪ್ರಕರಣಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ ಎಂಬುದನ್ನು ಸಹ ಪರಿಶೀಲಿಸಿ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಸಿ.ಎನ್. ಮಂಜೇಗೌಡ, ಡಿ.ತಿಮ್ಮಯ್ಯ, ಮುಡಾ ಆಯುಕ್ತ ಜಿ.ಟಿ.ದಿನೇಶ್ ಹಾಗೂ ಇತರರು ಇದ್ದರು.