ಉಪ್ಪಿನಂಗಡಿ: ಮೂರು ಕೋಟಿಗೂ ಅಧಿಕ ಮೊತ್ತದ ಅನುದಾನವನ್ನು ಹಿಂದಿನ ಸರ್ಕಾರದಿಂದ ಒದಗಿಸಿಕೊಟ್ಟು ಸುಸಜ್ಜಿತ ಕಾಲೇಜು ಕಟ್ಟಡವನ್ನು ನಿರ್ಮಿಸಲು ಕಾರಣರಾದ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಕಟ್ಟಡದ ಉದ್ಘಾಟನಾ ಕಾರ್ಯದಲ್ಲಿ ನಿರ್ಲಕ್ಷಿಸಿರುವುದು ಉಪಕಾರ ಸ್ಮರಣೆ ಇಲ್ಲದ ನಡೆಯಾಗಿದೆ ಎಂದು ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರಮಜಲು ಟೀಕಿಸಿದ್ದಾರೆ.
ಫೆ.25ರಂದು ಲೋಕಾರ್ಪಣೆಗೊಳ್ಳಲಿರುವ ಕಾಲೇಜು ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ಶಿಷ್ಟಾಚಾರದ ನೆಲೆಯಲ್ಲಿ ಜನಪ್ರತಿನಿಧಿಗಳನ್ನು ಕರೆಯಲಾಗಿದೆ. ಜತೆಗೆ ಧಾರ್ಮಿಕ ಸಂಸ್ಥೆಗಳ, ಸಂಘ-ಸಂಸ್ಥೆಗಳ ಮುಂದಾಳುಗಳನ್ನೂ ಕರೆಯಲಾಗಿದೆ. ತನ್ನ ಶಾಸಕತ್ವದ ಅವಧಿಯಲ್ಲಿ ವಿವೇಕ ಯೋಜನೆಯಡಿ 3.06 ಕೋಟಿ ರೂ. ಅನುದಾನ ಒದಗಿಸಿದ, ತನ್ಮೂಲಕ ಈ ಕಟ್ಟಡದ ನಿರ್ಮಾಣಕ್ಕೆ ಕಾರಣಕರ್ತರಾದ ಸ್ಥಳೀಯರೇ ಆಗಿರುವ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಮರೆತಿರುವುದು ಖೇದಕರ. ಇದು ವಿದ್ಯಾ ಸಂಸ್ಥೆಯೊಳಗೆ ರಾಜಕೀಯವನ್ನು ಬೆರೆಸುವ ಕೀಳು ಅಭಿರುಚಿಯಾಗಿದೆ ಎಂದರು.