ವಿಕ್ರಮ ನಾಡಿಗೇರ ಧಾರವಾಡ
ನಗರದ ಲಕಮನಹಳ್ಳಿ (ಹೊಸಯಲ್ಲಾಪುರ)ಯಲ್ಲಿ ಶೇಖರಣೆಯಾದ ತ್ಯಾಜ್ಯ ಸುತ್ತಲಿನ ಜನರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಆ ತ್ಯಾಜ್ಯದ ಗುಡ್ಡ ಕರಗಿಸಲು ಸಂಬಂಧಿಸಿದ ಅಧಿಕಾರಿಗಳು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಇನ್ನೂ ಕಾಲ ಕೂಡಿ ಬರದ ಕಾರಣ ಜನರಿಗೆ ತ್ಯಾಜ್ಯದ ಕಂಟಕ ಇನ್ನೂ ಹಲವು ವರ್ಷ ತಪ್ಪಿದ್ದಲ್ಲ.
ಮಹಾನಗರ ಪಾಲಿಕೆ ಡ್ರೋಣ್ ಸಮೀಕ್ಷೆ (2020ರಲ್ಲಿ) ನಡೆಸಿದಾಗ ಹೊಸಯಲ್ಲಾಪುರ ತ್ಯಾಜ್ಯ ಘಟಕದಲ್ಲಿ 1.20 ಲಕ್ಷ ಮೆ.ಟನ್ ಹಾಗೂ ಹುಬ್ಬಳ್ಳಿಯಲ್ಲಿ 3.20 ಲಕ್ಷ ಮೆ. ಟನ್ ಪಾರಂಪರಿಕ ಪೌರ ಘನತ್ಯಾಜ್ಯ (ಲೆಗಸಿ ವೇಸ್ಟ್) ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿತ್ತು. ಈ ತ್ಯಾಜ್ಯ ಕರಗಿಸುವ ಕಾರ್ಯ ಪಾಲಿಕೆಗೆ ಸವಾಲಿನದ್ದಾಗಿದೆ.
ಧಾರವಾಡದ ತ್ಯಾಜ್ಯ ಬೃಹತ್ ಪರ್ವತವಾಗಿದ್ದು, ಅಲ್ಲಿ ಆಗಾಗ ಕಾಣುವ ಬೆಂಕಿಯಿಂದ ಹೊರ ಸೂಸುವ ಹೊಗೆ ಸುತ್ತಲಿನ ನಿವಾಸಿಗಳು ರೋಗಕ್ಕೆ ತುತ್ತಾಗುವಂತೆ ಮಾಡಿದೆ. ಇದನ್ನು ವಿಲೇ ಮಾಡಲು ವಿಸ್ತೃತ ಯೋಜನಾ ವರದಿ (ಡಿಪಿಎಆರ್) ಸಿದ್ಧಪಡಿಸಿ ಸುಮಾರು 3 ವರ್ಷಗಳ ಹಿಂದೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಕೆಲ ತಿಂಗಳ ಹಿಂದಷ್ಟೇ ಯೋಜನೆಗೆ ಅನುಮೋದನೆ ಸಿಕ್ಕಿದೆ. ಹೀಗಾಗಿ ಈ ಪರ್ವತ ಕರಗಲು ವರ್ಷಗಳೇ ಉರುಳಲಿವೆ.
ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇ ಮಾಡಲು 3 ತಿಂಗಳ ಹಿಂದೆ ಕರೆದಿದ್ದ ಟೆಂಡರ್‌ನಲ್ಲಿ ಯಾರೊಬ್ಬರೂ ಭಾಗವಹಿಸಿರಲಿಲ್ಲ. ಇತ್ತೀಚೆಗೆ ಮತ್ತೊಮ್ಮೆ ಕರೆದ ಟೆಂಡರ್‌ನಲ್ಲಿ ಒಬ್ಬರು ಮಾತ್ರ ಭಾಗಿಯಾಗಿದ್ದು, ಮೌಲ್ಯಮಾಪನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದೇ ಕತೆ ಹುಬ್ಬಳ್ಳಿಯದ್ದೂ ಆಗಿದೆ.
ಈ ತ್ಯಾಜ್ಯದ ಜತೆಗೆ ನಿತ್ಯವೂ 150 ರಿಂದ 200 ಮೆ. ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ತ್ಯಾಜ್ಯವನ್ನು ಬೇರೆ ಕಡೆ ಸಂಗ್ರಹ ಮಾಡುತ್ತಿದ್ದು, ಅದನ್ನು ಕಾಂಪೋಸ್ಟ್ ಘಟಕದ ಮೂಲಕ ವಿಲೇ ಮಾಡಲಾಗುತ್ತಿದೆ. ಆದರೆ ಆ ಕಾರ್ಯವೂ ಮಂದಗತಿಯಲ್ಲಿ ಸಾಗಿದ್ದರಿಂದ ತ್ಯಾಜ್ಯ ಸಂಗ್ರಹ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.
ತ್ಯಾಜ್ಯ ವಿಲೇವಾರಿ ಟೆಂಡರ್ ಪಡೆದವರು ತ್ಯಾಜ್ಯದಲ್ಲಿನ ಪ್ಲಾಸ್ಟಿಕ್, ಗಾಜಿನ ಬಾಟಲಿ, ಕಲ್ಲು, ಮಣ್ಣು ಹೀಗೆ ಇತರ ಪದಾರ್ಥಗಳನ್ನು ಬೇರ್ಪಡಿಸಿ ಇಡೀ ಜಾಗವನ್ನು ಸಮತಟ್ಟಾಗಿ ಮಾಡಲಿದ್ದಾರೆ. ಆದರೆ ಈ ಕಾರ್ಯಕ್ಕೆ ಯಾರೂ ಮುಂದಾಗದಿರುವುದು ವಿಪರ್ಯಾಸವೇ ಸರಿ.
ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ: ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದ ಪಾಲಿಕೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಅನುಮೋದನೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ತ್ವರಿತವಾಗಿ ಅನುಮೋದನೆ ಪಡೆದಿದ್ದರೆ, ಈ ಹೊತ್ತಿಗೆ ಅರ್ಧ ಪರ್ವತ ಕರಗುತ್ತಿತ್ತು. ಆದರೆ ಅಧಿಕಾರಿಗಳ ತಾತ್ಸಾರ ಮನೋಭಾವದಿಂದ ತ್ಯಾಜ್ಯ ವಿಲೇ ವಿಳಂಬವಾಗಿದೆ ಎಂಬುದು ಸುತ್ತಲಿನ ಜನರ ಆರೋಪ.
ಲೆಗಸಿ ವೇಸ್ಟ್ ವಿಲೇ ಮಾಡಲು ಟೆಂಡರ್ ಕರೆದಿದ್ದು, ಶೀಘ್ರದಲ್ಲಿ ಅಂತಿಮವಾಗಲಿದೆ. ವೈಜ್ಞಾನಿಕವಾಗಿ ವಿಲೇ ಮಾಡುವ ಕುರಿತು ಮಾರ್ಗಸೂಚಿ ಇದೆ. ಅದರಂತೆ ವಿಲೇ ಮಾಡಬೇಕು. ಇನ್ನು ನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ಬೇರೆ ಕಡೆ ಸಂಗ್ರಹಿಸಿ ವಿಲೇ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.*ಮಲ್ಲಿಕಾರ್ಜುನ ಬಿ.ಎಂ., ಕಾರ್ಯ ನಿರ್ವಾಹಕ ಇಂಜಿನಿಯರ್, ಘನ ತ್ಯಾಜ್ಯ ವಿಲೇವಾರಿ ವಿಭಾಗ