ಮೈಸೂರು: ಆಷಾಢ ಮಾಸದ 3ನೇ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತರು ನಾಗಲಕ್ಷ್ಮೀ ಅಲಂಕಾರದಿಂದ ಕಂಗೊಳಿಸಿದ ಚಾಮುಂಡಿದೇವಿಯ ದರ್ಶನ ಪಡೆದು ಪುನೀತರಾದರು.
ತುಂತುರು ವರ್ಷಧಾರೆಯ ಸಿಂಚನ, ಮಂಜು-ಚುಮುಚುಮು ಚಳಿಯ ನಡುವೆಯೇ ಭಕ್ತರ ದಂಡು ಬೆಳಗ್ಗೆಯಿಂದಲೇ ಬೆಟ್ಟದತ್ತ ದೌಡಾಯಿಸಿತು. ಈ ಭಕ್ತ ಸಮೂಹದ ಸಮ್ಮುಖದಲ್ಲಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ದಿನವಿಡೀ ನೆರವೇರಿದವು.
ದೇವಸ್ಥಾನದ ಅರ್ಚಕರು ಚಾಮುಂಡೇಶ್ವರಿ ದೇವಿಗೆ ವಿವಿಧ ಬಗೆಯ ಪೂಜಾ ಕೈಂಕರ್ಯಗಳನ್ನು ವಿಧಿವತ್ತಾಗಿ ನಡೆಸಿದರು. ಬಳಿಕ ಬೆಳಗ್ಗೆ 5.30 ರಿಂದ ಸಾರ್ವಜನಿಕ ದರ್ಶನಕ್ಕೆ ದೇಗುಲದ ದ್ವಾರಗಳು ತೆರೆದುಕೊಂಡವು. ಮಹಾಮಂಗಳಾರತಿ, ಅಭಿಷೇಕ ನೆರವೇರಿಸಿದ ಬಳಿಕ ರಾತ್ರಿ 10ರವರೆಗೂ ನಾಡದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಾಗರೋಪಾದಿಯಲ್ಲಿ ಸೇರಿದ್ದ ಜನ ಪೂಜಾ ಕೈಂಕರ್ಯಗಳನ್ನು ಕಣ್ತುಂಬಿಕೊಂಡರು.
ಆಷಾಢ ಮಾಸದ 3ನೇ ಶುಕ್ರವಾರದ ಅಂಗವಾಗಿ ದೇವಿಗೆ ಶ್ರೀ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಸೇವಂತಿಗೆ, ಚೆಂಡುಹೂವು, ಗುಲಾಬಿ, ಮಲ್ಲಿಗೆ… ಹೀಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿದ್ದರಿಂದ ಗರ್ಭಗುಡಿಯ ಅಂದವೂ ಕಳೆಗಟ್ಟಿತ್ತು.
ಭಕ್ತರ ಸರದಿ ಸಾಲು: ಸೂರ್ಯಕಣ್ಣು ಬಿಡುವ ಮುನ್ನವೇ ದೇವಿ ದರ್ಶನಕ್ಕೆ ಸರತಿ ಸಾಲು ಕಂಡುಬಂತು. ದೇವರ ದರ್ಶನಕ್ಕೆ ಉಚಿತ ಪ್ರವೇಶದೊಂದಿಗೆ, 50 ರೂ., 300 ರೂ. ಟಿಕೆಟ್ ಪಡೆದವರಿಗಾಗಿ ಪ್ರತ್ಯೇಕ ಸರದಿ ವ್ಯವಸ್ಥೆ ಇತ್ತು. ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದರೂ ಭಕ್ತರ ಸರದಿ ಸಾಲು ಹನುಮಂತನ ಬಾಲದಂತೆ ಬೆಳೆದಿತ್ತು. ದೇವಸ್ಥಾನದ ಪ್ರವೇಶ ದ್ವಾರದಿಂದ ಹಿಡಿದು ದೇವರ ಗರ್ಭಗುಡಿವರೆಗೂ ಸಾಲಿನಲ್ಲಿ ಬಂದು ದೇವಿಯ ದರ್ಶನ ಪಡೆದುಕೊಂಡರು.
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಣ್ಣು ಹಾಯಿಸಿದಷ್ಟು ದೂರದವರೆಗೆ ಜನವೋ ಜನ. ಮಹಿಷಾಸುರನ ವಿಗ್ರಹದಿಂದ ದೇವಸ್ಥಾನದವರೆಗೆ, ದೇವಸ್ಥಾನದ ಸುತ್ತಲಿನ ಪ್ರದೇಶ ಭಕ್ತರಿಂದ ತುಂಬಿ ಹೋಗಿತ್ತು. ಅಂಗಡಿ, ವ್ಯಾಪಾರಿ ಮಳಿಗೆ, ಹೋಟೆಲ್‌ಗಳಲ್ಲೂ ಜನದಟ್ಟಣೆ ಕಂಡುಬಂತು.
ಆಷಾಢ ಶುಕ್ರವಾರ ವನಿತೆಯರಿಗೆ ವಿಶೇಷ ದಿನ. ಈ ಹಿನ್ನೆಲೆಯಲ್ಲಿ ಮಹಿಳಾ ಭಕ್ತರೇ ಹೆಚ್ಚಾಗಿ ಕಂಡು ಬಂದರು. ಗೃಹಿಣಿಯರು, ಯುವತಿಯರು, ನವ ದಂಪತಿಗಳು ಹಾಗೂ ವೃದ್ಧರು ತಮ್ಮ ಕುಟುಂಬ ಸಮೇತ ಆಗಮಿಸಿದ್ದರು.
ಸಾವಿರಾರು ಭಕ್ತರು ಬೆಟ್ಟದ ಪಾದದಿಂದ ಮೆಟ್ಟಿಲು ಹತ್ತಿಕೊಂಡು ಬಂದು ದೇವರ ದರ್ಶನ ಪಡೆದರು. ಕೆಲ ಭಕ್ತರು ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಬಂದು ತಮ್ಮ ಹರಕೆ ತೀರಿಸಿದರು. ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ವತಿಯಿಂದ ಕಲ್ಪಿಸಲಾಗಿತ್ತು. ಖಾಸಗಿ ವಾಹನ ಪ್ರವೇಶ ನಿರ್ಬಂಧಿಸಿದ್ದರಿಂದ ಲಲಿತ್‌ಮಹಲ್ ಹೆಲಿಪ್ಯಾಡ್‌ನಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾರ್ವಜನಿಕರು ಬೆಟ್ಟಕ್ಕೆ ಆಗಮಿಸಿದರು.
ದಿನಕರ್ ತೂಗದೀಪ, ಚಿಕ್ಕಣ್ಣ ಭೇಟಿ:
ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಾಯಕ ನಟ ದರ್ಶನ್ ಸಹೋದರ, ಸಿನಿಮಾ ನಿರ್ದೇಶಕ ದಿನಕರ್ ತೂಗುದೀಪ ಚಾಮುಂಡಿಬೆಟ್ಟಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು. ಹಾಸ್ಯ ನಟ ಚಿಕ್ಕಣ್ಣ ದಂಪತಿ ಈ ಸಂದರ್ಭದಲ್ಲಿದ್ದರು.
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಎಂಎಲ್‌ಸಿ ಸೂರಜ್ ರೇವಣ್ಣ ನಾಡದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬೆಂಬಲಿಗರೊಂದಿಗೆ ಆಗಮಿಸಿದ್ದ ಸೂರಜ್ ಜತೆಗೆ ಕೆಲವರು ಸೆಲ್ಫಿ ತೆಗೆದುಕೊಂಡರು.
ಅಮ್ಮನವರ ವಧರ್ಂತಿ ಇಂದು
ಚಾಮುಂಡೇಶ್ವರಿ ಅಮ್ಮನವರ ವಧರ್ಂತಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜು.27ರಂದು ಬೆಳಗ್ಗೆ 9.30ಕ್ಕೆ ಚಾಮುಂಡೇಶ್ವರಿ ಅಮ್ಮನವರ ವಧರ್ಂತಿ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬೆಳಗ್ಗೆ 8ರಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 9.30ಕ್ಕೆ ಮಹಾಮಂಗಳಾರತಿ, 10.30ಕ್ಕೆ ಅಮ್ಮನವರಿಗೆ ಚಿನ್ನದ ಪಲ್ಲಕ್ಕಿ ಉತ್ಸವ, ಮಂಟಪೋತ್ಸವ ಪ್ರಸಾದ ವಿನಿಯೋಗ, ರಾತ್ರಿ 8.30ಕ್ಕೆ ಶ್ರೀಯವರಿಗೆ ಉತ್ಸವ ಫಲಪೂಜೆ, ದರ್ಬಾರ್ ಉತ್ಸವ, ಮಂಟಪೋತ್ಸವ ಹಾಗೂ ರಾಷ್ಟ್ರಾಶೀರ್ವಾದ ಜರುಗಲಿದೆ.
=---------------