ಕೊಪ್ಪಳ: ಸದ್ಯ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಕುಟುಂಬದವರು ತೀರಿಕೊಂಡಾಗ ಎಷ್ಟೋ ಜನ ಅಂತಿಮ ಸಂಸ್ಕಾರಕ್ಕೂ ಬಾರದೇ ನಿಷ್ಕರುಣಿಗಳಂತೆ ವರ್ತಿಸುತ್ತಾರೆ. ಆದರೆ, ಆಗಾಗ ಅಲ್ಪ-ಸ್ವಲ್ಪ ಆಹಾರ ನೀಡಿದ ಒಡತಿ ಮರಣಿಸಿದಾಗ ಆಗಮಿಸಿ ಕೋತಿಯೊಂದು ದುಃಖದಲ್ಲಿ ಭಾಗಿಯಾಗಿ ಅಂತಿಮ ಸಂಸ್ಕಾರವರೆಗು ಇದ್ದು ಎಲ್ಲರಿಗೂ ಮಾನವೀಯತೆ ಪಾಠ ಮಾಡಿದೆ.
ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ವೃದ್ಧೆಯೋರ್ವಳು ಮಂಗಳವಾರ ಮೃತಪಟ್ಟಿದ್ದು, ಅಂತಿಮ ಶವ ಸಂಸ್ಕಾರದವರೆಗೆ ಕೋತಿಯೊಂದು ವೃದ್ಧೆ ಮುಂದೆ ಕುಳಿತು ಸಂತಾಪ ಸೂಚಿಸುವ ಮೂಲಕ ಅಚ್ಚರಿ ಮೂಡಿಸಿತು. ಗ್ರಾಮದ ನೀಲಮ್ಮ (86) ವಯೋಸಹಜ ಸಾವನ್ನಪ್ಪಿದ್ದಾರೆ. ಮನೆ ಮುಂದೆ ಶವ ಕೂಡಿಸಲಾಗಿದೆ. ಈ ವೇಳೆ ಎಲ್ಲಿಂದಲೋ ಬಂದ ಕೋತಿ ಶವದ ಮುಂದೆ ಕೂತು ಎಲ್ಲ ತಯಾರಿ ವೀಕ್ಷಿಸಿದೆ. ಅಷ್ಟೊಂದು ಜನರಿದ್ದರೂ ಹೆದರದೇ ದುಃಖ ಭಾವದಲ್ಲಿ ಕುಳಿತು ಶವವನ್ನೇ ನೋಡುತ್ತ ಸಮಯ ಕಳೆದಿದೆ.
ಜನರು ಓಡಿಸಲು ನೋಡಿದರೂ ಹೋಗಿಲ್ಲ. ಮನುಷ್ಯರಂತೆ ಅಜ್ಜಿಗೆ ನಮಸ್ಕಾರ ಮಾಡಿದೆ. ಅಂತಿಮ ಸಂಸ್ಕಾರಕ್ಕೆ ಮನೆಯಿಂದ ಸ್ಮಶಾನಕ್ಕೆ ಶವ ಕೊಂಡೊಯ್ಯುವವರೆಗೂ ಇದ್ದು, ಅಂತಿಮ ನಮಸ್ಕಾರ ಸಲ್ಲಿಸಿ ತೆರಳುವ ಮೂಲಕ ನೋಡುಗರನ್ನು ನಿಬ್ಬೆರಗಾಗಿಸಿದೆ. ಮಗನೊಂದಿಗೆ ವಾಸವಿರುವ ಅಜ್ಜಿ ಆಗಾಗ ಬರುತ್ತಿದ್ದ ಕೋತಿಗೆ ಆಹಾರ ನೀಡುತ್ತಿದ್ದರು. ಅದಕ್ಕೆ ಅಂತಿಮ ಯಾತ್ರೆ ವೇಳೆ ಆಗಮಿಸಿ ನಮನ ಸಲ್ಲಿಸಿದೆ ಎಂದು ನೆರೆಹೊರೆಯವರು ತಿಳಿಸಿದರು.