ಜಿಲ್ಲೆ

ನೋಟು ಎಸೆದು ಹಣ ಬಿದ್ದಿದೆ ತೆಗೆದುಕೊಳ್ಳಿ... ಎನ್ನುತ್ತಾ ಬೇರೆಡೆ ಗಮನ ಸೆಳೆದು ಹಣ ದೋಚುತ್ತಿದ್ದವರ ಬಂಧನ, 21 ಲಕ್ಷ ರೂ. ವಶ

arunakunigal

ದಾವಣಗೆರೆ: ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆದು ಲಕ್ಷಾಂತರ ರೂ. ನಗದು ದೋಚುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಜಿಲ್ಲೆಯ ಪೊಲೀಸರು ಬಂಧಿಸಿ 21 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಚೆನ್ನೈ ಮೂಲದ ನರೇಶ ಮತ್ತು ಲೋಂಡಾ ಮೂಲದ ಮಹಮದ್​ ಹುಸೇನ್​ ಅಲಿಯಾಸ್​ ಮುಲ್ಲಾ ಬಂಧಿತರು.

ಆರೋಪಿಗಳು ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಇಂಥ ಕೃತ್ಯಗಳಲ್ಲಿ ತೊಡಗುತ್ತಿದ್ದರು. ನೋಟನ್ನು ಕೆಳಗೆ ಬಿಸಾಕಿ "ನಿಮ್ಮ ಹಣ ಬಿದ್ದಿದೆ ತೆಗೆದುಕೊಳ್ಳಿ'' ಎಂದು ಹೇಳಿ ಜನರ ಗಮನ ಆ ಕಡೆಗೆ ಹೋಗುವಂತೆ ಮಾಡಿ, ಅಷ್ಟರಲ್ಲಿ ಜನರ ಬಳಿ ಹಣ ತೆಗೆದುಕೊಂಡು ಪರಾರಿಯಾಗುತ್ತಿದ್ದರು. ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಹೊರ ಬರುವ ಗ್ರಾಹಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ವೃದ್ಧರು, ಒಬ್ಬಂಟಿಯಾಗಿ ಬಂದವರು ವಂಚನೆಗೆ ಒಳಗಾಗುತ್ತಿದ್ದರು. ಕಾರಿಗೆ ಪೆಟ್ರೋಲ್​ ಹಾಕಿಸಿಕೊಳ್ಳಲು ಹೋದ ಸಮಯದಲ್ಲೂ ಆರೋಪಿಗಳು ಕರಾಮತ್ತು ತೋರಿಸುತ್ತಿದ್ದರು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್​ ತಿಳಿಸಿದ್ದಾರೆ.

ಆರೋಪಿಗಳಿಂದ ದಾವಣಗೆರೆ ವಿದ್ಯಾನಗರ ಠಾಣೆಯ 2 ಪ್ರಕರಣಗಳಲ್ಲಿ 6 ಲಕ್ಷ, ಹರಿಹರ ನಗರ ಪೊಲೀಸ್​ ಠಾಣೆಯ 1 ಪ್ರಕರಣದಲ್ಲಿ 2 ಲಕ್ಷ ರೂ, ಹಾವೇರಿ ಜಿಲ್ಲೆಯ ಹಾನಗಲ್​ ಪೊಲೀಸ್​ ಠಾಣೆಯ 1 ಪ್ರಕರಣದಲ್ಲಿ 13 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.