ಶಿಗ್ಗಾಂವಿ: ಐಕ್ಯತಾ ಸಪ್ತಾಹ ದಿನಾಚರಣೆ ಅಂಗವಾಗಿ ಸರ್ಕಾರದ ನಿರ್ದೇಶನದಂತೆ ಪ್ರಮಾಣಿಕರಿಸಿದ ಐಕ್ಯತಾ ವಚನ ಪ್ರತಿಜ್ಞಾ ವಿಧಿ ಸ್ವೀಕರಿಸುವ ಜತೆಗೆ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಕಾಯದ ಕುಲಪತಿ ಪ್ರೊ.ಟಿ.ಎಂ ಭಾಸ್ಕರ್ ಹೇಳಿದರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಉದ್ಘಾಟಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು. ಸಾಮಾಜಿಕ ಐಕ್ಯತೆಯ ಹಿನ್ನೆಲೆಯಲ್ಲಿ ಚಳವಳಿಗಳು ನಡೆದವು. ಐಕ್ಯತೆ ಮತ್ತು ಸಾಮರಸ್ಯದ ಚಳವಳಿಗಳಲ್ಲಿ ಅಹಿಂಸಾ ಚಳವಳಿ ಮಾದರಿಯಾಗಿದೆ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ವೆಂಕನಗೌಡ ಪಾಟೀಲ ಉಪನ್ಯಾಸ ನೀಡಿ, ಸಂವಿಧಾನದ ಆಶಯಗಳಿಗೆ ಧಕ್ಕೆ ಬರುವಂತಹ ಸನ್ನಿವೇಶಗಳು ಸಮಾಜದಲ್ಲಿ ಸೃಷ್ಟಿ ಆಗುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ.
ಜಾತಿಯ ಹೆಸರಿನಲ್ಲಿ ಹಿಂಸೆಗಳು ನಡೆಯುತ್ತಿವೆ. ಜಾತಿ ಹೆಸರಿನಲ್ಲಿ ತಾರತಮ್ಯ ಇದೆ, ದೌರ್ಜನ್ಯ ಇದೆ. ಕಾನೂನು ರೀತಿ ಹೋರಾಟ ಒಂದು ಕಡೆ ಆದರೆ ಮನಸ್ಸಿನಲ್ಲಿ ಸಾಂಸ್ಕೃತಿಕ ಬದಲಾವಣೆಗಳಾಗಬೇಕು ಎಂದರು.
ಹಿರಿಯ ಸಂಶೋಧನಾಧಿಕಾಗಳಾದ ಡಾ.ಕೆ ಪ್ರೇಮಕುಮಾರ್, ಸಹಾಯಕ ಕುಲಸಚಿವರಾದ ಶಹಜಹಾನ್ ಮುದಕವಿ, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ. ಗಿರೇಗೌಡ ಅರಳಿಹಳ್ಳಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಬಂಡುಸುರೇಶ ಕೆಂಪವಾಡೇಕರ್ ಕಾರ್ಯಕ್ರಮ ನಿರೂಪಿಸಿದರು, ಕಿರಿಯ ಸಹಾಯಕ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು, ಸಹಾಯಕ ಪ್ರಾಧ್ಯಾಪಕಿ ಡಾ.ರಜಿಯಾ ನಧಾಪ್ ವಂದಿಸಿದರು.