ತಿ.ನರಸೀಪುರ ಪಟ್ಟಣದ ಹೆಳವರಹುಂಡಿಯಲ್ಲಿ ಶುಕ್ರವಾರ ಕನಕ ಸಮುದಾಯ ಭವನವನ್ನು ಡಾ. ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು. ವಸಂತ ಶ್ರೀಕಂಠ, ಎನ್.ಸೋಮಣ್ಣ, ಸಿ.ಪ್ರಕಾಶ್, ಎಚ್.ಸಿ.ಅರುಣ್ ಕುಮಾರ, ನಾಗೇಂದ್ರ ಇತರರು ಇದ್ದರು. 
ಜಿಲ್ಲೆ

ವರುಣ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರ

ಶಿವಶಂಕರ್ ಎಂ. ಹೆಬ್ಬಳ್ಳ

ತಿ.ನರಸೀಪುರ : ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಇದುವರೆಗೆ 110 ಕೋಟಿ ರೂ.ಗಳ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಮೂಲಸೌಕರ್ಯಗಳನ್ನು ಕಲ್ಪಿಸಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಹೆಳವರಹುಂಡಿಯಲ್ಲಿ ಶುಕ್ರವಾರ 1.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕನಕ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರಲಿ ಅಥವಾ ವಿಪಕ್ಷವಾಗಿದ್ದಾಗಲೂ ನಿರಂತರವಾಗಿ ಅಭಿವೃದ್ಧಿಗೆ ಅನುದಾನ ತರುವ ಮೂಲಕ ಸಿಎಂ ಸಿದ್ದರಾಮಯ್ಯ ಶಾಸಕರಾಗಿ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಿದ್ದೇವೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದರು.

ಸಕ್ರಿಯ ರಾಜಕಾರಣಕ್ಕೆ ನಾನು ಬರುತ್ತಿದ್ದಂತೆ ವರುಣದಲ್ಲಿ ಶಾಸಕರಾಗಿದ್ದ ವೇಳೆ ಪಟ್ಟಣದ ಈ ಭಾಗ ಅಭಿವೃದ್ಧಿ ಕಂಡಿರಲಿಲ್ಲ. ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸರಿಯಾಗಿರಲಿಲ್ಲ. ಸಮಸ್ಯೆಯನ್ನು ಅರಿತು ನಿರಂತರವಾಗಿ ಅಭಿವೃದ್ಧಿಗೆ ಯೋಜನೆ ರೂಪಿಸಿ ನೂರಾರು ಕೋಟಿ ರೂಪಾಯಿಗಳ ಅನುದಾನ ವಿನಿಯೋಗಿಸಿ, ಕಚ್ಚಾ ರಸ್ತೆಗಳನ್ನು ಸಿಮೆಂಟ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಿದ್ದೇವೆ. ವಿಸ್ತರಣೆಗೊಂಡ ಪಟ್ಟಣ ಪ್ರದೇಶಕ್ಕೆ ಸಮರ್ಪಕವಾಗಿ ಮೂಲಸೌಕರ್ಯವನ್ನು ಕಲ್ಪಿಸಿದ್ದೇವೆ ಎಂದರು.

25 ಲಕ್ಷ ನೆರವು: ಹೆಳವರಹುಂಡಿಯಲ್ಲಿ ಸತತ 17 ವರ್ಷಗಳ ಕಾಲ ಸರ್ಕಾರದ ಅನುದಾನ 1.60 ಕೋಟಿ ರೂ.ಗಳನ್ನ ಸದ್ಬಳಕೆ ಮಾಡಿಕೊಂಡು ಸುಸಜ್ಜಿತ ಕನಕ ಭವನವನ್ನು ನಿರ್ಮಾಣ ಮಾಡಲಾಗಿದೆ. ಹಿಂದಿನ ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ನೆರವಾಗಿದ್ದಾರೆ. ಹೆಳವರಹುಂಡಿಯಲ್ಲಿ ಅರ್ಧಕ್ಕೆ ನಿಂತಿರುವ ಬಸವ ಭವನ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು 25 ಲಕ್ಷ ರೂ. ಅನುದಾನವನ್ನು ರಾಜ್ಯ ಸರ್ಕಾರದಿಂದ ಮಂಜೂರು ಮಾಡಿಸಿ, ಇನ್ನೆರಡು ತಿಂಗಳಲ್ಲಿ ಅದನ್ನೂ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಸ್ಥಳೀಯ ನಿವಾಸಿಯಾದ ಕ್ರೇಜಿ ಸುರೇಶ್ ಹೆಳವರಹುಂಡಿ ವೃತ್ತದಲ್ಲಿ ದಿ.ರಾಕೇಶ್ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಆಧುನಿಕ ಶೈಲಿಯ ಪ್ರಯಾಣಿಕರ ತಂಗುದಾಣವನ್ನು ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಭವನ ನಿರ್ಮಾಣಕ್ಕೆ ಸಹಕರಿಸಿದ ಹಲವರನ್ನು ಸನ್ಮಾನಿಸಲಾಯಿತು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಸಿದ್ದಪ್ಪ, ಪುರಸಭೆ ಅಧ್ಯಕ್ಷೆ ವಸಂತಾ ಶ್ರೀಕಂಠ, ಹಾಲಿ ಸದಸ್ಯ ಎನ್.ಸೋಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಸದಸ್ಯ ಆರ್. ನಾಗರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಟರಾಜು, ಮಾಜಿ ಉಪಾಧ್ಯಕ್ಷ ರಚ್.ಬಿ. ಚಿಕ್ಕನಂಜಯ್ಯ, ಮಾಜಿ ಅಧ್ಯಕ್ಷ ಮೂರ್ತಿ, ಹಾಲಿ ನಿರ್ದೇಶಕ ಎಂ.ಕೆ.ಸಹದೇವ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ರಂಗಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎಸ್.ಮಹದೇವಸ್ವಾಮಿ, ನಿರ್ದೇಶಕ ಎಚ್. ಸಿ.ಅರುಣ್ ಕುಮಾರ, ತಾ.ಪಂ ಮಾಜಿ ಸದಸ್ಯ ಎಂ.ರಮೇಶ್, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಕುಪ್ಯಾ ಪ್ರಭಾಕರ್, ಜಿ.ಪಂ ಮಾಜಿ ಸದಸ್ಯ ಕೆ.ಮಹದೇವ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ ಇತರರು ಇದ್ದರು.