ಜಿಲ್ಲೆ

ಕೇಂದ್ರ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟದ ವ್ಯಾನ್‌ಗೆ ಚಾಲನೆ

ಬೆಂಗಳೂರು: ಬೆಂಗಳೂರಿನ ಈರುಳ್ಳಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಸರಬರಾಜು ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎ್) ಬೆಂಗಳೂರು ಶಾಖೆಯು ಕೇಂದ್ರ ಸರ್ಕಾರದ ನಿರ್ದೇಶನದ ಅನ್ವಯ ಬೆಲೆ ಸ್ಥಿರೀಕರಣ ನಿಧಿ ಅಡಿಯಲ್ಲಿ ರಿಯಾಯತಿ ದರದಲ್ಲಿ ಈರುಳ್ಳಿ ಮಾರಾಟಕ್ಕೆ ಮುಂದಾಗಿದ್ದು, ಸೋಮವಾರ ಈರುಳ್ಳಿ ಮಾರಾಟದ ಮೊಬೈಲ್ ವ್ಯಾನ್‌ಗೆ ಚಾಲನೆ ನೀಡಲಾಯಿತು.

35 ರುಪಾಯಿಗೆ ಕೆಜಿ ಈರುಳ್ಳಿಯನ್ನು ಈ ಮೊಬೈಲ್ ವ್ಯಾನ್ಗಳಲ್ಲಿ ಮಾರಾಟ ಮಾಡಲಾಗುವುದು. ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯ ವರದಿಗಳ ಹಿನ್ನಲೆಯಲ್ಲಿ, ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ಸಿಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿದೆ.

ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಖರೀದಿಸಿದ ಈರುಳ್ಳಿಯನ್ನು ಬೆಂಗಳೂರು ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಾರಾಟ ಮಾಡಲಾಗುವುದು ಎಂದು ಎನ್‌ಸಿಸಿಎ್ ಬೆಂಗಳೂರು ಶಾಖೆ ವ್ಯವಸ್ಥಾಪಕ ರವಿಚಂದ್ರ ತಿಳಿಸಿದ್ದಾರೆ.

ಎಲ್ಲೆಲ್ಲಿ ಸಂಚರಿಸಲಿದೆ ಮೊಬೈಲ್ ವ್ಯಾನ ?

ಬೆಂಗಳೂರಿನ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ ನಾಲ್ಕು ಮೊಬೈಲ್ ವ್ಯಾನ್‌ಗಳನ್ನು ಮಂಜೂರು ಮಾಡಲಾಗಿದೆ. ಪ್ರಾರಂಭಿಕವಾಗಿ 15 ಮೊಬೈಲ್ ವ್ಯಾನ್‌ಗಳು ಈರುಳ್ಳಿ ಮಾರಾಟಕ್ಕೆ ಇಳಿದಿದ್ದು, ಮುಂದಿನ ಒಂದು ವಾರದಲ್ಲಿ 112 ಮೊಬೈಲ್ ವ್ಯಾನ್‌ಗಳು ಕಾರ್ಯಾಚರಣೆಗಿಳಿಯಲಿವೆ.

ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಸ್ಥಿರಗೊಳ್ಳುವವರೆಗೆ ಮೊಬೈಲ್ ವ್ಯಾನ್ ಮೂಲಕ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮುಂದುವರಿಸುವುದಾಗಿ ಎನ್‌ಸಿಸಿಎ್ ಅಧಿಕಾರಿಗಳು ತಿಳಿಸಿದ್ದಾರೆ.

ಬಸವೇಶ್ವರ ನಗರದ ಗಾಯಿತ್ರಿ ದೇವಸ್ಥಾನ, ನಂದಿನಿ ಲೇಔಟ್‌ನ ಬಸ್ ನಿಲ್ದಾಣ, ಸುಂಕದಕಟ್ಟೆ ವೈಲ್ಡ್ ಕ್ರ್‌ಟಾ ಸಮೀಪ, ನಾಗರಭಾವಿ ಅನ್ನಪೂರ್ಣೇಶ್ವರಿ ನಗರ, ರಾಜಾಜಿನಗರದ ರಾಮಮಂದಿರ, ಗೋವಿಂದರಾಜನಗರದ ಪಟ್ಟೆಗಾರಪಾಳ್ಯ, ಲಗ್ಗೆರೆ ಚೌಡೇಶ್ವರಿನಗರ, ಮಹಾಲಕ್ಷ್ಮಿ ಲೇಔಟ್‌ನ ಗಣಪತಿ ಬಡಾವಣೆ, ಮಲ್ಲೇಶ್ವರದ ತರಕಾರಿ ಮಾರುಕಟ್ಟೆ, ಚಾಮರಾಜಪೇಟೆಯ ಉಮಾ ಟಾಕೀಸ್, ಯಶವಂತಪುರದ ಎಲ್‌ಐಸಿ ಕಾಲೋನಿ, ವಸಂತನಗರದ ಎನ್‌ಸಿಸಿಎ್ ಕಚೇರಿ, ನಾಗರಭಾವಿಯ ಡಿ.ಮಾರ್ಟ್, ಪೀಣ್ಯ 2ನೇ ಹಂತ ಬಸ್ ನಿಲ್ದಾಣ ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣ ಸುತ್ತಮುತ್ತ ಈರುಳ್ಳಿ ಮಾರಾಟದ ಮೊಬೈಲ್ ವ್ಯಾನ್ ಸಂಚರಿಸಲಿದೆ.

ಮನೆಯಲ್ಲಿ ಯಾವುದೇ ತರಕಾರಿ ಇಲ್ಲದೇ ಇದ್ದರೂ ಒಂದೆರೆಡು ದಿನ ನಡೆಯುತ್ತೆ. ಆದರೆ ಈರುಳ್ಳಿ ಇಲ್ಲದಿದ್ದರೆ ನಡೆಯುವುದಿಲ್ಲ. ಈರುಳ್ಳಿ ಕತ್ತರಿಸುವಾಗಷ್ಟೇ ಅಲ್ಲ ಖರೀದಿಸುವಾಗಲೂ ಗೃಹಿಣಿಯರ ಕಣ್ಣಲ್ಲಿ ನೀರು ಬರುವಂತಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದ್ದು, ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟಕ್ಕೆ ವ್ಯವಸ್ಥೆ ಮಾಡಿರುವುದು ಉತ್ತಮ ಬೆಳವಣಿಗೆ. ಮೊಬೈಲ್ ವ್ಯಾನ್‌ಗಳನ್ನು ವಾರ್ಡ್‌ಗೊಂದರಂತೆ ಬಿಟ್ಟರೆ ಗ್ರಾಹಕರಿಗೆ ಅನುಕೂಲವಾಗಲಿದೆ.

-ಯಶೋಧ, ಗೃಹಿಣಿ, ನಾಗರಭಾವಿ