ಜಿಲ್ಲೆ

ಬಾಲಕಿ ಬಳಿ ಅಸಭ್ಯವಾಗಿ ವರ್ತನೆ: ಸ್ನೇಹಿತನ ಮಗಳನ್ನೇ ಕೊಂದು ಸಾವಿನ ಮನೆಯ ಕದ ತಟ್ಟಿದ ವ್ಯಕ್ತಿ

ನೆಲಮಂಗಲ: ಬಾಲಕಿ ಬಳಿ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿ ಬಾಲಕಿಯನ್ನು ಇರಿದು ಕೊಲೆ ಮಾಡಿ ತಾನೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರ ಸಮೀಪದ ಜಿಂದಾನ್​ ನಗರದಲ್ಲಿ ಭಾನುವಾರ ನಡೆದಿದೆ.

ಮೂಲತಃ ಉತ್ತರಾಖಂಡ ಮೂಲದ, ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಜಿಂದಾನ್​ ನಗರದಲ್ಲಿದ್ದ ಲಕ್ಷ್ಮಣ್​​ಸಿಂಗ್​ ಪುತ್ರಿ ಖುಷಿಪರಗಾಯ(11) ಮೃತ ಬಾಲಕಿ. ಹರಿಯಾಣ ಮೂಲದ ನಂದಕಿಶೋರ್​(50) ಆತ್ಮಹತ್ಯೆ ಮಾಡಿಕೊಂಡವ.

20 ವರ್ಷದಿಂದ ಜಿಂದಾಲ್​ ನಗರದಲ್ಲಿ ವಾಸವಿದ್ದ ಲಕ್ಷ್ಮಣ್​ಸಿಂಗ್​, ದಾಬಸ್​ಪೇಟೆ ಬಳಿಯ ಜಿಂದಾಲ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿಯಾಗಿದ್ದ ನಂದಕಿಶೋರ್​ ತಿಂಗಳಿಂದ ಋಷಿಪರಗಾಯ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪಾಲಕರಿಗೆ ವಿಷಯ ತಿಳಿದು ಸ್ನೇಹಿತರ ನಡುವೆ ಜಗಳವಾಗಿತ್ತು. ಲಕ್ಷ್ಮಣ್​​ಸಿಂಗ್​, ಜಿಂದಾಲ್​ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ದೂರು ನೀಡಿದ್ದರಿಂದ ಸಂಘದ ಮುಖ್ಯಸ್ಥರು ನಂದಕಿಶೋರ್​ಗೆ ಮನೆ ಖಾಲಿ ಮಾಡುವಂತೆ 15 ದಿನಗಳ ಹಿಂದೆ ನೋಟಿಸ್​ ನೀಡಿದ್ದರು ಎನ್ನಲಾಗಿದೆ.

ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಟವಾಡಲು ತೆರಳುತ್ತಿದ್ದ ಬಾಲಕಿಯನ್ನು ಎದುರುಗೊಂಡ ನಂದಕಿಶೋರ್​ ಅಸಭ್ಯವಾಗಿ ವರ್ತಿಸಿ, ಚಾಕುವಿನಿಂದ ಬಾಲಕಿ ಹೊಟ್ಟೆ ಭಾಗಕ್ಕೆ ಹಿರಿದು ಕೊಲೆ ಮಾಡಿದ್ದಾನೆ. ಮಗಳ ಚೀರಾಟ ಕೇಳಿದ ತಂದೆ ಲಕ್ಷ್ಮಣ್​ಸಿಂಗ್​, ಪುತ್ರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಿಲ್ಲ. ನಂದಕಿಶೋರ್​ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆರೋಪಿ ಕುಟುಂಬಸ್ಥರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.