ಸಿ.ಎಸ್.ವಿಶ್ವನಾಥಶಾಸ್ತ್ರಿ, ಶ್ರೀನಿವಾಸಪುರ
ತಾಲೂಕಿನ ಗೌನಿಪಲ್ಲಿ ಗ್ರಾಮವು ಜಿಲ್ಲೆಯಲ್ಲಿಯೇ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ದೊಡ್ಡಮಟ್ಟದ ಸಂತೆಯು ನಡೆಯುತ್ತದೆ. ಕುರಿ, ಮೇಕೆ ಮತ್ತು ದನಗಳ ವ್ಯಾಪಾರ ಸೇರಿ ದಿನಸಿ ಸಾಮಗ್ರಿಗಳ ಮಾರಾಟ ಕೇಂದ್ರವೂ ಆಗಿದೆ. 19 ಸಾವಿರ ಜನಸಂಖ್ಯೆ, 6 ಸಾವಿರ ಮತದಾರರು, 4 ವಾರ್ಡ್ಗಳು, 16ಮಂದಿ ಗ್ರಾಪಂ ಸದಸ್ಯರಿದ್ದರೂ ಸಹ ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತವಾಗಿರುವುದು ಗ್ರಾಪಂ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.
ರಸ್ತೆಗಳು ದುರಸ್ತಿ ಕಂಡು ಹಲವು ವರ್ಷಗಳೇ ಕಳೆದಿವೆ. ಬಸ್ ನಿಲ್ದಾಣದಲ್ಲಿರುವ ಪ್ರಮುಖ ರಸ್ತೆ ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ. ಬಿಸಿಲು ಬಂದರೆ ಧೂಳಿನ ಮಜ್ಜನ. ಇದೆ ರಸ್ತೆಯ ಪಕ್ಕದಲ್ಲಿಯೇ ವಾರದ ಸಂತೆ ನಡೆಯುತ್ತದೆ. ಪ್ರತಿ ಮಂಗಳವಾರ ನಡೆಯುವ ಸಂತೆಗೆ ಆಂಧ್ರ ಪ್ರದೇಶ, ಚಿಂತಾಮಣಿ, ಶ್ರೀನಿವಾಸಪುರ ಸೇರಿ ವಿವಿಧ ಭಾಗಗಳಿಂದ ಸಾವಿರಾರು ಜನ ಸೇರುತ್ತಾರೆ.
ಸಂತೆ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದು, ಒಂದು ಭಾಗದಲ್ಲಿ ಮಾತ್ರ ಶೆಡ್ ನಿಮಾರ್ಣ ಮಾಡಿದ್ದು, ಬಿಸಿಲು ಬಂದರೆ ಟಾರ್ಪಲ್ಗಳನ್ನು ಕಟ್ಟಿಕೊಂಡು ವ್ಯಾಪಾರ ನಡೆಸಬೇಕಾದ ಪರಿಸ್ಥಿತಿ ಇದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಗೃಹ ನಿರ್ಮಾಣವಾಗಿದೆಯಾದರೂ ಬೀಗ ಜಡಿಯಲಾಗಿದೆ. ಪ್ರತಿ ಅಂಗಡಿಯಿಂದ 100 ರೂ. ಶುಲ್ಕ ವಸೂಲಿ ಮಾಡುವ ಗ್ರಾಮ ಪಂಚಾಯಿತಿ ವ್ಯಾಪಾರಸ್ಥರಿಗೆ ಸೌಲಭ್ಯ ಕಲ್ಪಿಸಿಲ್ಲವೆಂದು ಸ್ಥಳಿಯ ವ್ಯಾಪಾರಸ್ಥರು ಆರೋಪಿಸಿದ್ದಾರೆ.
ರಸ್ತೆಯಲ್ಲಿ ಗುಂಡಿಗಳು
ಗೌನಿಪಲ್ಲಿಯಿಂದ ಬಿ.ಕೊತ್ತಕೋಟ, ರಾಯಲ್ಪಾಡು ಮತ್ತು ಚಿಂತಾಮಣಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದಿವೆ. ಇದೇ ರಸ್ತೆಯಲ್ಲಿ ಆಂಧ್ರ ಕಡೆಯಿಂದ ಬರುವ ಭಾರಿ ಗಾತ್ರದ ಸಿಮೆಂಟ್ ಲಾರಿಗಳ ಓಡಾಟದಿಂದ ಗೌನಿಪಲ್ಲಿ ಗ್ರಾಮದ ರಸ್ತೆಯ ಆಜುಬಾಜು ಇರುವ ಅಂಗಡಿ ಮಾಲೀಕರು ಪ್ರತಿದಿನ ಧೂಳು ಕುಡಿಯುವಂತಾಗಿದೆ. ಬಸ್ ನಿಲ್ದಾಣ ಸಮೀಪವೇ ಪೊಲೀಸ್ ಠಾಣೆ ಇದ್ದರೂ ಭಾರಿ ಗಾತ್ರದ ವಾಹನಗಳನ್ನು ತಡೆಯುವ ಕೆಲಸ ಮಾಡುತ್ತಿಲ್ಲ. ಮಾಮೂಲು ವಸೂಲಿ ಪಡೆದು ಸದರಿ ರಸ್ತೆಯ ಮೂಲಕವೇ ಭಾರಿ ವಾಹನಗಳನ್ನು ಓಡಾಡಲು ಬಿಡಲಾಗುತ್ತಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
"30 ವರ್ಷದಿಂದ ಸಂತೆಯಲ್ಲಿ ದಿನಸಿ ವ್ಯಾಪಾರ ಮಾಡುತ್ತಿದ್ದೇನೆ. ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಸೌಲಭ್ಯಗಳು ಕಲ್ಪಿಸಿಲ್ಲ. ಟಾರ್ಪಲ್ ಕಟ್ಟಿಕೊಂಡು ವ್ಯಾಪಾರ ನಡೆಸುತ್ತಿದ್ದೇನೆ. ಶುಲ್ಕ ಮಾತ್ರ ವಸೂಲಿ ಮಾಡುತ್ತಿದ್ದಾರೆ."
-ಅಪ್ಸರ್ಪಾಷಾ
ವ್ಯಾಪಾರಸ್ಥ, ಗೌನಿಪಲ್ಲಿ
"ಗ್ರಾಪಂನಿಂದ ಕೆಲವರಿಗೆ ಮಾತ್ರ ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ಉಳಿದವರಿಗೆ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಮಹಿಳೆಯರಿಗೆ ಶೌಚಗೃಹದ ವ್ಯವಸ್ಥೆ ಮಾಡಿಲ್ಲ. ಕುಡಿಯುವ ನೀರೂ ಇಲ್ಲ. ಮಳೆ ಬಂದರೆ ಟಾರ್ಪಲ್ ಅಳವಡಿಸಿಕೊಂಡು ವ್ಯಾಪಾರ ನಡೆಸಬೇಕಾದ ದುಸ್ಥಿತಿ ಇದೆ."
-ವೆಂಕಟಮ್ಮ
ವ್ಯಾಪಾರಸ್ಥೆ
"20 ವರ್ಷಗಳಿಂದ ಕೊತ್ತಂಬರಿ, ಕರಿಬೇವು, ಸೊಪ್ಪ ವ್ಯಾಪಾರ ಮಾಡುತ್ತಿದ್ದೇನೆ. ಸಂಜೆಯಾದರೆ ಗುತ್ತಿಗೆದಾರ ಕಮೀಷನ್ ಪಡೆಯುತ್ತಾನೆ. ವ್ಯಾಪಾರ ನಡೆಸಲು ಸೌಲಭ್ಯಗಳು ಕಲ್ಪಿಸಿಲ್ಲ. ಬಿಸಿಲಿನಲ್ಲಿಯೇ ವ್ಯಾಪಾರ ನಡೆಸಬೇಕಾಗಿದೆ."
-ಚನ್ನಪ್ಪ
ಸೊಪ್ಪ ವ್ಯಾಪಾರಿ
"ಸಂತೆಯಲ್ಲಿ ಎಲ್ಲ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂಬ ಕಾರಣಕ್ಕೆ ಸುತ್ತಮುತ್ತಲಿನ ತಾಲೂಕುಗಳು, ಗ್ರಾಮಸ್ಥರು ಗೌನಿಪಲ್ಲಿಗೆ ಬರುತ್ತಾರೆ. ಈಗಾಗಲೇ ಪಟ್ಟಣ ಪಂಚಾಯಿತಿ ಮಾಡಬೇಕೆಂದು ಒತ್ತಾಯ ಮಾಡಲಾಗಿದೆ. ಸರ್ಕಾರ ಪಟ್ಟಣ ಪಂಚಾಯಿತಿ ಮಾಡಲು ಅನುಮೋದನೆ ನೀಡಿದೆ. ಆದರೆ ಗ್ರಾಮದಲ್ಲಿ ಸೌಲಭ್ಯಗಳು ಮರೀಚಿಕೆಯಾಗಿವೆ."
-ಜಾಮಕಾಯಲ ವೆಂಕಟೇಶ್
ಗೌನಿಪಲ್ಲಿ ನಿವಾಸಿ
" ಗೌನಿಪಲ್ಲಿ ಬಸ್ನಿಲ್ದಾಣದಿಂದ ಶ್ರೀನಿವಾಸಪುರಕ್ಕೆ ಬರುವ ರಸ್ತೆ ಅಭಿವೃದ್ಧಿಗೆ ಸಿಆರ್ಐಎಫ್ ಯೋಜನೆಯಿಂದ 6 ಕೋಟಿ ರೂ. ಮಂಜೂರಾಗಿದೆ. ಟೆಂಡರ್ ಕರೆಯಬೇಕಿದ್ದು, ಬಸ್ ನಿಲ್ದಾಣದಿಂದ ಬಿ.ಕೊತ್ತಕೋಟಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ಮಂಜೂರು ಆಗಿ 2 ವರ್ಷ ಆಗಿದ್ದು, ಅನುದಾನ ಬಂದಿಲ್ಲ. ಹಾಗಾಗಿ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ. ಅನುದಾನ ಬಂದರೆ ಟೆಂಡರ್ ಕರೆದು ರಸ್ತೆ ಅಭಿವೃದ್ಧಿಪಡಿಸಲಾಗುವುದು."
-ನಾರಾಯಣಸ್ವಾಮಿ
ಎಇಇ ಲೋಕೋಪಯೋಗಿ ಇಲಾಖೆ ಶ್ರೀನಿವಾಸಪುರ