ಜಿಲ್ಲೆ

ಗುತ್ತಿಗೆದಾರರ ಸಂಘದ ವಿರುದ್ಧ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕ್ತೇನೆ: ಸಚಿವ ಮುನಿರತ್ನ

ಬೆಂಗಳೂರು: ಗುತ್ತಿಗೆದಾರರ ಸಂಘದ ವಿರುದ್ಧ ಮಾನನಷ್ಟ ಪ್ರಕರಣ ಹಾಕುವುದಾಗಿ ಸಚಿವ ಮುನಿರತ್ನ ಘೋಷಿಸಿದ್ದಾರೆ. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ, ಸದಸ್ಯರು ಸೇರಿದಂತೆ ಎಲ್ಲರ ಮೇಲೆ ಒಟ್ಟು 50 ಕೋಟಿ ರೂಪಾಯಿಯ ಮಾನಹಾನಿ ಪ್ರಕರಣ ದಾಖಲಿಸುತ್ತೇನೆ. ಕೋರ್ಟ್​ನಲ್ಲಿ ಬಂದು ಅವರು ದಾಖಲೆ ಸಮೇತ ಆರೋಪ ಸಾಬೀತು ಮಾಡಲಿ. ಪ್ರಚಾರಕ್ಕಾಗಿ ಪ್ರಧಾನಿ ಅವರಿಗೆ ಪತ್ರ ಬರೆಯೋದಲ್ಲ, ಕಾನೂನು ಹೋರಾಟದಲ್ಲಿ ಶೀಘ್ರದಲ್ಲೇ ದಾಖಲೆ ಕೊಟ್ಟು ಕಮಿಷನ್​ ದಂಧೆಯಲ್ಲಿ ಇರುವ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನ ಬಯಲಿಗೆಳೆಯಲಿ ಎಂದು ಮುನಿರತ್ನ ಸವಾಲು ಹಾಕಿದರು. ನಾವು ತಪ್ಪು ಮಾಡಿದ್ದರೆ ನಮಗೆ ಶಿಕ್ಷೆ ಆಗುತ್ತೆ ಎಂದರು.

ಮೊಟ್ಟೆ, ನಾಟಿಕೋಳಿ ಚರ್ಚೆಯ ಬೆನ್ನಲ್ಲೇ, "ಕಮಿಷನ್​'' ಆರೋಪ ಮತ್ತೆ ಮುನ್ನೆಲೆಗೆ ಬಂದಿದ್ದು ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ರಾಜ್ಯ ಸರ್ಕಾರ ಮಾತ್ರವಲ್ಲ, ಬಿಬಿಎಂಪಿ ಕೂಡ ಕಮಿಷನ್​ ಪಡೆಯುತ್ತಿದೆ. ರಾಜ್ಯ ಸರ್ಕಾರ 40% ಕಮಿಷನ್​ ಪಡೆಯುತ್ತಿದ್ದರೆ, ಬಿಬಿಎಂಪಿ 50% ಕಮಿಷನ್ ವಸೂಲಿ ಮಾಡುತ್ತಿದೆ ಎಂದು ಗುತ್ತಿಗೆದಾರ ಸಂಘ ಗಂಭೀರ ಆರೋಪ ಮಾಡಿದೆ. ಕೋಲಾರ ಉಸ್ತುವಾರಿ ಸಚಿವರೇ ಕಮಿಷನ್​ ಹಣ ಸಂಗ್ರಹ ಮಾಡ್ತಿದ್ದಾರೆ. ಮುನಿರತ್ನ ಹಣ ಕಲೆಕ್ಟ್ ಮಾಡಿ ಅಂತ ಹೇಳಿರುವ ಬಗ್ಗೆ ವರದಿ ಇದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬುಧವಾರ ಕಿಡಿಕಾರಿದ್ದರು.

ಈ ಆರೋಪ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಮುನಿರತ್ನ, ವಿರೋಧ ಪಕ್ಷದವರ ಕುಮ್ಮಕ್ಕಿನಿಂದ ಇಂತಹ ಆರೋಪ ಮಾಡುತ್ತಿದ್ದಾರೆ. ಗುತ್ತಿಗೆದಾರರ ಸಂಘವನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಮಿಷನ್​ ಬಗ್ಗೆ ದಾಖಲೆ ಇದ್ದರೆ ಲೋಕಾಯುಕ್ತ ಇಲ್ಲವೇ, ಕೋರ್ಟ್​, ಮಾಧ್ಯಮ... ಹೀಗೆ ಯಾವುದಕ್ಕಾದರೂ ಕೊಟ್ಟು ತನಿಖೆ ನಡೆಸಿ ಎಂದು ಕೇಳಬಹುದು. ಆದರೆ ಇದ್ಯಾವುದನ್ನೂ ಮಾಡದೆ ಸುಮ್ಮನೆ ಆರೋಪ ಮಾಡಿದ್ರೆ ಏನರ್ಥ? ಇಂದೇ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು. ವಿಪಕ್ಷ ನಾಯಕ ಸಿದ್ದರಾಮಯ್ಯರ ಬಳಿ ದಾಖಲೆ ಇದ್ಯಾ? ಇದ್ದರೆ ಅವರಾದರೂ ಬಿಡುಗಡೆ ಮಾಡಲಿ. ಕೆಂಪಣ್ಣ ಅವರು ಹಿರಿಯರು. ಸಂಘದ ಹೆಸರಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯತ್ನ ಬೇಡ. ಯಾರಿಗಾದರೂ ಅನ್ಯಾಯ ಆಗಿದ್ದರೆ ಅವರ ಪರ ನಿಂತು ಅವರಿಗೆ ನ್ಯಾಯ ಕೊಡಿಸಲು ಗುತ್ತಿಗೆದಾರ ಸಂಘ ಹೋರಾಡಬೇಕು ಎಂದರು.

ಒಂದು ವಾರದೊಳಗೆ ದಾಖಲೆ ಬಿಡುಗಡೆ ಮಾಡಬೇಕು. ದಾಖಲೆ ಇಲ್ಲದಿದ್ದರೆ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ಒಂದು ವಾರದ ನಂತರ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಕೇಸ್ ಸಹ ದಾಖಲು ಮಾಡಲಾಗುವುದು. ನಾವು ತಪ್ಪು ಮಾಡಿದ್ದರೆ ನಮಗೆ ಶಿಕ್ಷೆಯಾಗಲಿ ಎಂದು ಮುನಿರತ್ನ ಹೇಳಿದರು.