ಭಟ್ಕಳ: ಮಹಾಶಿವರಾತ್ರಿಯ ಆರಾಧನೆಗಾಗಿ ಮುರ್ಡೆಶ್ವರದ ಮಾತೋಬಾರನ ಸನ್ನಿಧಿಗೆ ಭಕ್ತರ ಮಹಾಪೂರವೇ ಹರಿದುಬಂದಿದ್ದು ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ಜಗದೊಡೆಯನ ದರ್ಶನ ಪಡೆದರು.
ಭಕ್ತರ ಹಷೋದ್ಗಾರಗಳ ನಡುವೆ ಓಲಗ ಮಂಟಪದಲ್ಲಿ ನಡೆದ ಪುಷ್ಪರಥೋತ್ಸವ, ದೇವಸ್ಥಾನದ ಪೌಳಿಯಲ್ಲಿ ಸುಂದರವಾಗಿ ಅಲಂಕೃತಗೊಂಡ ಸ್ವರ್ಣ ರಥದಲ್ಲಿ ಶಿವನ ಮೆರವಣಿಗೆ ಭಕ್ತರ ಕಣ್ಮನ ಸೆಳೆದು ಭಾವಪರವಶರಾಗುವಂತೆ ಮಾಡಿತು.
ತಾಲೂಕಿನ ಪ್ರಮುಖ ದೇವಸ್ಥಾನಗಳಲ್ಲಿ ಓಂ ನಮಃ ಶಿವಾಯ ಜಪಮಾಲೆ ಕೇಳಿ ಬಂತು. ನಂತರ ಮಹಾಮಂಗಳಾರತಿ, ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು.
ದೇವಸ್ಥಾನಕ್ಕೆ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ.ಡಿ. ನಾಯ್ಕ ಮತ್ತು ಕುಟುಂಬಸ್ಥರು, ತಹಸೀಲ್ದಾರ್ ಎಸ್. ರವಿಚಂದ್ರ ಭೇಟಿ ನೀಡಿ ದೇವರ ದರ್ಶನ ಪಡೆದರು. ಪ್ರಧಾನ ಅರ್ಚಕ ಜಯರಾಮ ಅಡಿಗರ ನೇತೃತ್ವದಲ್ಲಿ ಮಹಾಶಿವರಾತ್ರಿಯ ಎಲ್ಲ ಅನುಷ್ಠಾನಗಳು ಸಾಂಗವಾಗಿ ನಡೆದವು.