ಜಿಲ್ಲೆ

21ರಂದು ಅರಮನೆ ಆವರಣದಲ್ಲಿ ಅರ್ಥಪೂರ್ಣ ವಿಶ್ವ ಯೋಗ ದಿನ ಆಚರಣೆ

ಮೈಸೂರು: ವಿಶ್ವ ಯೋಗ ದಿನವನ್ನು ಜೂ.21 ರಂದು ಅರಮನೆ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ವಿಶ್ವ ಯೋಗ ದಿನದ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ವರ್ಷ ಯೋಗ ದಿನಾಚರಣೆಯಲ್ಲಿ ಭಾಗವಹಿಸುತ್ತೇನೆ. ಸರ್ಕಾರದಿಂದ ನೀಡಿರುವ 1 ಲಕ್ಷ ರೂ. ಅನುದಾನದ ಜತೆಗೆ ವಿವಿಧ ದಾನಿಗಳಿಂದ ಅನುದಾನವನ್ನು ಪಡೆದು ಆ ಅನುದಾನವನ್ನು ಬಳಕೆ ಮಾಡಿ ಉತ್ತಮವಾಗಿ ಯೋಗ ದಿನಾಚರಣೆ ಆಯೋಜನೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಜೂ.21 ರಂದು ವಿಶ್ವ ಯೋಗ ದಿನ ಆಚರಿಸಲಾಗುತ್ತದೆ. ಮೈಸೂರಿನ ಯೋಗವು ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ರಾಜ್ಯ ಸರ್ಕಾರದಿಂದ ಜಿಲ್ಲಾ ಮಟ್ಟಕ್ಕೆ ಯೋಗ ದಿನಾಚರಣೆ ಆಯೋಜನೆಗೆ 1 ಲಕ್ಷ ರೂ.ಅನುದಾನ ಬರುತ್ತದೆ. ಯೋಗವನ್ನು ಅರಮನೆಯ ಮುಂಭಾಗದಲ್ಲಿ ಆಯೋಜನೆ ಮಾಡಲಾಗುವುದು. ಅಂದು ಬೆಳಗ್ಗೆ 7 ಗಂಟೆಗೆ ಯೋಗ ಪ್ರಾರಂಭವಾಗುವುದು. ಕನಿಷ್ಠ 10 ಸಾವಿರ ಯೋಗಪಟುಗಳು ಭಾಗವಹಿಸುವರು ಎಂದರು.

ಸರ್ಕಾರದ ಶಿಷ್ಟಾಚಾರ ಪಾಲನೆ ಮಾಡಿ ಯೋಗ ದಿನವನ್ನು ಆಯೋಜನೆ ಮಾಡಲಾಗುವುದು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗುವುದು. ವೇದಿಕೆ ಕಾರ್ಯಕ್ರಮ ಬೆಳಗ್ಗೆ 6.30 ಕ್ಕೆ ಪ್ರಾರಂಭವಾಗುವುದು. ಅಚ್ಚುಕಟ್ಟಾಗಿ ಯೋಗ ದಿನಾಚರಣೆ ಆಯೋಜನೆಗೆ ವಿವಿಧ ಇಲಾಖೆಗಳಿಗೆ ನಿಯೋಜಿಸುವ ಕಾರ್ಯಗಳನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
ವಿವಿಧ ಯೋಗ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.