ಜಿಲ್ಲೆ

ಅರ್ಥಪೂರ್ಣ ಸ್ವಾತಂತ್ರ್ಯ ದಿನ ಆಚರಣೆ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಈ ಬಾರಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ರಾಷ್ಟ್ರೀಯ ಹಬ್ಬಗಳ ಸಮಿತಿ ಮತ್ತು ತಾಲೂಕು ಆಡಳಿತ ತೀರ್ಮಾನ ಕೈಗೊಂಡಿತು.

ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಅರವಿಂದ ಮಾತಾನಾಡಿ, ಸ್ವಾತಂತ್ರ್ಯ ದಿನ ದೇಶದ ದೊಡ್ಡ ಹಬ್ಬ. ಈ ಹಬ್ಬವನ್ನು ಮನೆ ಹಬ್ಬದಂತೆ ಅಚರಿಸುವುದು ನಮ್ಮೆಲ್ಲರ ಕರ್ತವ್ಯ.

ನಗರದ ನೇತಾಜೀ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಧ್ವಜಾರೋಹಣ ಪೊಲೀಸ್ ಮತ್ತು ಮಕ್ಕಳಿಂದ ಪಥಸಂಚಲ, ಒಂದು ದಿನ ಮುಂಚೆ ಎಲ್ಲ ಶಾಲೆ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಲಾಗುವುದು. ದಿನಾಚರಣೆ ಪ್ರಯುಕ್ತ ಕಡ್ಡಾಯವಾಗಿ ಎಲ್ಲ ಕಚೇರಿಗಳಿಗೆ ದೀಪಾಲಂಕಾರ ಮಾಡಬೇಕು. ಬಾವುಟ ಸರಿಯಾದ ರೀತಿಯಲ್ಲಿ ಅಳವಡಿಸಿ ಕಟ್ಟಬೇಕು ಬೇಕು. ಇನ್ನು 7 ಮಂದಿ ಸಾಧಕರಿಗೆ ಅಂದು ಸನ್ಮಾನ ಮಾಡಲಾಗುವುದು. ಅದಕ್ಕಾಗಿ ಪ್ರತ್ಯೇಕ ಸಮತಿ ರಚಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಿಬೇಕು. ಸಕಾರಣವಿಲ್ಲದೆ ಗೈರಾದರೆ ಅಂತಹ ಆಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚೆರಿಕೆ ನೀಡಿದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ಇಒ ಜಿ.ಕೆ.ಹೊನ್ನಯ್ಯ, ಪಿಎಸ್‌ಐ ಗೋಪಾಲ್, ಸಮಾಜ ಕಲ್ಯಾಣ ಆಧಿಕಾರಿ ಚೆನ್ನಪ್ಪ ಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಅಶ್ವತ್ಥಪ್ಪ, ತಾಲೂಕು ಅರೋಗ್ಯಾಧಿಕಾರಿ ಹೇಮಾ, ಅರ್‌ಐ ಅಬ್ದುಲ್ಲಾ ಖಾದರ್, ಕನ್ನಡಪರ ಹೋರಾಟಗಾರರಾದ ಜಿ.ಎಲ್.ಅಶ್ವತ್ಥನಾರಾಯಣ್, ಡಾ.ಅದಿಮೂರ್ತಿರೆಡ್ಡಿ, ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್, ಹಿರೇಬಿದನೂರು ರಾಜಣ್ಣ ಪ್ರಭು, ದಲಿತ ಒಕ್ಕೂಟಗಳ ಅಧ್ಯಕ್ಷ ಎಂ.ಅರ್.ಸತ್ಯನಾರಾಯಣ್, ಆರ್.ಎನ್.ರಾಜು ಇದ್ದರು.