ಬಳ್ಳಾರಿ: ಎಂಬಿಬಿಎಸ್ ವಿದ್ಯಾರ್ಥಿ ಶ್ರೇಯಸ್ ಜೋಶಿ(25) ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಸಾವಿಗೂ ಮುನ್ನ ಅಕ್ಕನಿಗೆ ಕರೆ ಮಾಡಿದ್ದ ಶ್ರೇಯಸ್, ಇದೇ ನನ್ನ ಕೊನೇ ಕಾಲ್ ಆಗಬಹುದು ಎನ್ನುತ್ತಾ ಕುತ್ತಿಗೆಗೆ ಹಗ್ಗ ಹಾಕಿಕೊಂಡು ವಿಡಿಯೋ ಕೂಡ ಮಾಡಿದ್ದ. ಪ್ಲೀಸ್ ಬೇಡ.. ಹಗ್ಗೆ ತೆಗೆ ಎಂದು ಅಕ್ಕ ಪರಿಪರಿಯಾಗಿ ಬೇಡಿಕೊಂಡರೂ ಕಿವಿಗೊಡದೆ ಸಾವಿನ ಮನೆಯ ಕದ ತಟ್ಟಿದ್ದಾನೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಶ್ರೇಯಸ್ ಬಳ್ಳಾರಿಯಲ್ಲಿ ಎಂಬಿಬಿಎಸ್ ಓದುತ್ತಿದ್ದ. ವಿಮ್ಸ್ ಹಾಸ್ಟೆಲ್ನ ತಂಗಿದ್ದ ಶ್ರೇಯಸ್, ಶುಕ್ರವಾರ ಸಂಜೆ ತನ್ನ ಕೋಣೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಶ್ರೇಯಸ್‌ನನ್ನ ಕೆಳಗಿಳಿಸಿದ ಸ್ನೇಹಿತರು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾನೆ. ಮಾನಸಿಕ ಖಿನ್ನತೆಯಿಂದ ಶ್ರೇಯಸ್ ಬಳಲುತ್ತಿದ್ದ ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ತನ್ನ ಅಕ್ಕ ಶ್ರದ್ಧಾಗೆ ಕರೆ ಮಾಡಿದ್ದ ಶ್ರೇಯಸ್ ಅರ್ಧ ತಾಸು ಮಾತುಕತೆ ನಡೆಸಿದ್ದ. 'ಇದು ನನ್ನ ಕೊನೆಯ ಕಾಲ್ ಇರಬಹುದು. ನಾಳೆ ನೀವೆಲ್ಲ ಬಂದು ನನ್ನನ್ನು ಕರೆದೊಯ್ಯಬಹುದು' ಎಂದಿದ್ದ. ಗಾಬರಿಗೊಂಡ ಅಕ್ಕ, ತಮ್ಮನಿಗೆ ಸಮಾಧಾನಪಡಿಸಿ ಧೈರ್ಯ ತುಂಬಲು ಯತ್ನಿಸಿದ್ದಾರೆ. ತಮ್ಮನ ಮಾತಿನಿಂದ ವಿಚಲಿತರಾದ ಅಕ್ಕ, ವಿಡಿಯೋ ಕಾಲ್ ಮಾಡುವೆ ಎಂದಾಗ ಶ್ರೇಯಸ್ ಬೇಡ ಎಂದಿದ್ದ. ಆದರೂ ಅಕ್ಕ ಪದೇಪದೆ ವಿಡಿಯೋ ಕಾಲ್ ಮಾಡಿದಾಗ ರಿಸೀವ್ ಮಾಡಿದ ತಮ್ಮ, ತನ್ನ ಕೊರಳಿಗೆ ಉರುಳು ಕಟ್ಟಿಕೊಂಡಿರುವುದನ್ನು ತೋರಿಸಿದ್ದಾನೆ. ಗಾಬರಿಗೊಂಡ ಅಕ್ಕ, ಉರುಳು ತೆಗಿ ಎಂದು ಪರಿಪರಿ ಕೇಳಿದರೂ ಕಾಲ್ ಕಟ್ ಮಾಡಿದ್ದಾನೆ. ಕೂಲಡೇ ಆಕೆ, ಶ್ರೇಯಸ್ನ ಗೆಳೆಯರಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾಳೆ. ಕೂಡಲೇ ಅವರು ರೂಮಿನ ಬಾಗಿಲು ತೆಗೆದು ನೋಡುವಷ್ಟರಲ್ಲಿ ಶ್ರೇಯಸ್ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ.
ಬೈಪೋಲಾರ್ ಡಿಸಾರ್ಡರ್ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೇಯಸ್ಗೆ ಎರಡ್ಮೂರು ವರ್ಷದಿಂದ ಪಾಲಕರು ವಿವಿಧೆಡೆ ಚಿಕಿತ್ಸೆ ಕೊಡಿಸಿದ್ದರು. ಹೈದರಾಬಾದ್, ಸೊಲ್ಲಾಪುರ, ನಾಂದೇಡ, ಪುಣೆಯ ಖ್ಯಾತ ನರರೋಗ ತಜ್ಞರಿಗೆ ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಬೈಪೋಲಾರ್ ಡಿಸಾರ್ಡರ್ ಕಾಯಿಲೆ ಗುಣಮುಖ ಆಗಿರಲಿಲ್ಲ ಅಂತೆ.