ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಧರ್ಮಗುರು ಮೌಲಾನಾ ಯೂಸೂಫ್ ಖಾದ್ರಿ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ತೌಪೀಕ ಬೇಪಾರಿ, ಇರಾಪ ಸುನ್ನೆವಾಲೆ, ಮಹೇಪೊಜ ರಹೆಮಾನ ಮತ್ತಿತರರಿದ್ದಾರೆ.  
ಜಿಲ್ಲೆ

ಅರ್ಕಾಟ್ ದರ್ಗಾದ ಉರುಸು ಹಿನ್ನೆಲೆ ಬೃಹತ್ ಶಾಂತಿಯಾತ್ರೆ, ಯಾವಾಗ ಗೊತ್ತಾ?

ವಿಜಯಪುರ: ಭಾವೈಕ್ಯತೆಯ ಪ್ರತೀಕವಾಗಿರುವ ಹಜರತ್ ಅರ್ಕಾಟ್ ದರ್ಗಾದ ಉರುಸು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದ್ದು ತನ್ನಿಮಿತ್ತ ಅ.4 ರಂದು ಝೂಲೂಸ್ ಏ. ಗೌಸಿಯಾ ಎಂಬ ಬೃಹತ್ ಶಾಂತಿಯಾತ್ರೆ ನಡೆಯಲಿದೆ ಎಂದು ಧರ್ಮಗುರು ಮೌಲಾನಾ ಯೂಸೂಫ್ ಖಾದ್ರಿ ತಿಳಿಸಿದರು.

ಈಗಾಗಲೇ ಉರುಸು ಅಂಗವಾಗಿ ಅನೇಕ ಸಿದ್ದತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ. ಮಾನವೀಯತೆ, ಶಾಂತಿ, ಸಹೋದರತೆ ತತ್ವ ಸಾರಿದ ಅರ್ಕಾಟ್ ದರ್ಗಾದ ಹಜರತ್ ಸೈಯ್ಯದ್ ನಾ ಅಬ್ದುಲ್ ಷಾ ಖಾದ್ರಿ ಅವರ ಉರುಸಿನಲ್ಲಿ ಹಿಂದು-ಮುಸ್ಲಿಂ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಹಸಿದವರಿಗೆ ಅನ್ನ, ಆರೋಗ್ಯ ಸಮಸ್ಯೆ ಎದುರಿಸುವವರಿಗೆ ಪಾರಂಪರಿಕ ಆಯುರ್ವೇದ ಔಷಧ ದೊರಕುವ ಮೂಲಕ ದವಾ ಹಾಗೂ ದುವಾ ಎರಡು ಇಲ್ಲಿ ಲಭ್ಯ ಎಂದ ಅವರು, ಉರುಸು ಅಂಗವಾಗಿ ದರ್ಗಾದ ಪ್ರಸ್ತುತ ಸಜ್ಜಾದೆ ನಷೀನ್ ಹಜರತ್ ಇಕ್ಬಾಲ್ ಪೀರಾ ಹುಸೈನಿ ಹಾಗೂ ಅವರ ಪುತ್ರ ಡಾ.ಸೈಯ್ಯದ್ ತಕೀ ಪೀರಾ ಹುಸೈನಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸೊಲ್ಲಾಪುರ ನಾಕಾದಿಂದ ಆರಂಭಗೊಳ್ಳಲಿರುವ ಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಶಹಾಪುರ ದರ್ವಾಜಾ, ಸರಾಫ್ ಬಜಾರ್, ಗಾಂಧಿ ವೃತ್ತ, ಅತಾವುಲ್ಲಾ ಸರ್ಕಲ್, ಬಡಿಕಮಾನ್, ಜಾಮೀಯಾ ಮಸೀದಿ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಯಾತ್ರೆಯು ದರ್ಗಾ ತಲುಪಲಿದೆ ಎಂದರು.

ಮುಖಂಡರಾದ ತೌಪೀಕ ಬೇಪಾರಿ, ಇರಾಪ ಸುನ್ನೆವಾಲೆ, ಮಹೇಪೊಜ ರಹೆಮಾನ, ಆಸೀಫ್ ಬಾಗವಾನ, ಮೌಲಾನಾ ಹುಸೇನ ರಜ್ವಿ, ಮೌಲಾನಾ ಇಫಾನ್ ಮತ್ತಿತರರಿದ್ದರು.