ಯೋಗ ಫೆಡರೇಷನ್ ಆಫ್ ಮೈಸೂರು ಟ್ರಸ್ಟ್ ವತಿಯಿಂದ ಜೂ.21ರ ಅಂತಾರಾಷ್ಟ್ರೀಯ ಯೋಗ ದಿನದಂದು ನಗರದ ಅರಮನೆ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಡಿ.ಶ್ರೀಹರಿ ಹೇಳಿದರು.
ಯೋಗ ಫೆಡರೇಷನ್ ಆಫ್ ಮೈಸೂರು, ಪತಂಜಲಿ ಯೋಗ ಶಿಕ್ಷಣ ಸಮಿತಿ, ಭಾರತ್ ಸ್ವಾಭಿಮಾನ್ ಟ್ರಸ್ಟ್ ಹಾಗೂ ಪತಂಜಲಿ ಯೋಗ ಸಮಿತಿ, ಮೈಸೂರು ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋರ್ಟ್ಸ್ ಫೌಂಡೇಷನ್, ಜಿಎಸ್‌ಎಸ್ ಯೋಗಿಕ್ ರಿಸರ್ಚ್ ಫೌಂಡೇಷನ್‌ಗಳ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 6 ಗಂಟೆಯೊಳಗೆ ಅರಮನೆ ಆವರಣಕ್ಕೆ ಬರಬೇಕು. 7 ಗಂಟೆಯಿಂದ 8 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ಯೋಗದಲ್ಲಿ ಆಸಕ್ತಿಯಿರುವ ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದರು.
ಬರುವಾಗ ಕುಡಿಯುವ ನೀರು, ಯೋಗ ಮ್ಯಾಟ್ ಹಾಗೂ ಯೋಗಕ್ಕೆ ಸೂಕ್ತವಾದ ಉಡುಪು ಧರಿಸಿ ಬರಬೇಕು. ವರಾಹ ದ್ವಾರ, ಬಲರಾಮ ದ್ವಾರ, ಕರಿಕಲ್ಲಿನ ತೊಟ್ಟಿ ದ್ವಾರ ಹಾಗೂ ಜಯರಾಮ ದ್ವಾರಗಳ ಮೂಲಕ ಪ್ರವೇಶಿಸಬಹುದಾಗಿದೆ. ಈ ಬಾರಿ ಸುಮಾರು 12 ಸಾವಿರ ಯೋಗ ಪಟುಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಯಾವುದೇ ದಾಖಲೆಗೆ ಪ್ರಯತ್ನಿಸುತ್ತಿಲ್ಲ. ಮುಂದಿನ ಬಾರಿ ಪ್ರಯತ್ನಿಸಲಾಗುವುದು ಎಂದು ಮಾಹಿತಿ ನೀಡಿದರು.
ಒಕ್ಕೂಟದ ಪದಾಧಿಕಾರಿಗಳಾದ ಶಶಿಕುಮಾರ್, ಸತ್ಯನಾರಾಯಣ, ಗೀತಾ, ಜಲೇಂದ್ರಕುಮಾರ್ ಇದ್ದರು.