ಜಿಲ್ಲೆ

ಸಂಸ್ಕೃತಿ ಉಳಿವಿಗೆ ಸಾಕ್ಷಿಯಾದ ಮದುವೆ

ಸಿದ್ದಾಪುರ: ಭಾರತೀಯ ಪರಂಪರೆಯಲ್ಲಿ ವಿವಾಹಕ್ಕೆ ವಿಶೇಷ ಸ್ಥಾನಮಾನವಿದೆ. ಅದರಂತೆ ಪಟ್ಟಣದ ಶಂಕರಮಠದಲ್ಲಿ ವಿದ್ವಾಂಸರ, ಗಣ್ಯರ ಹಾಗೂ ನೆಂಟರಿಷ್ಟರ ಉಪಸ್ಥಿತಿಯಲ್ಲಿ ವಿಶೇಷ ವಿವಾಹವೊಂದು ಸೋಮವಾರ ಸಂಭ್ರಮದಿಂದ ಜರುಗಿತು.

ವಿದ್ವಾಂಸ, ಗ್ರಂಥಕರ್ತ ವೇ. ವಿಶ್ವನಾಥ ಭಟ್ಟ ಗೋಳಿಕೈ ಹಾಗೂ ಮಮತಾ ಭಟ್ಟ ದಂಪತಿಯ ಪುತ್ರಿ ಮೇಧಾ ಹಾಗೂ ನಾರಾಯಣ ಭಟ್ಟ ಅತಾಳ ಹಾಗೂ ವೀಣಾ ಭಟ್ಟ ದಂಪತಿಯ ಪುತ್ರ ರಾಮಕೃಷ್ಣ ಅವರ ವಿವಾಹವು ಸನಾತನ ಆಶಯಗಳನ್ನು ಮರು ನಿರೂಪಿಸಿತು.

ವಿವಾಹ ವೇದಿಕೆ, ಯಜ್ಞ ವೇದಿಕೆ, ಸುಭಗ ವೇದಿಕೆ ಹಾಗೂ ಚಿಂತನ ವೇದಿಕೆ ಎನ್ನುವ 4 ವೇದಿಕೆಗಳನ್ನು ಸಿದ್ಧಪಡಿಸಿ ವಿವಾಹಕ್ಕೆ ಸಂಬಂಧಿಸಿದ ವಿಧಿ-ವಿಧಾನಗಳು ಜರುಗಿದವು. ಯಜ್ಞ ವೇದಿಕೆಯಲ್ಲಿ ಗ್ರಹಸ್ಥರಾದವರು ಮಧುರ ದಾಂಪತ್ಯಕ್ಕಾಗಿ ಔಪಾಸನಾ ಅಗ್ನಿ ಉಪಾಸನೆ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಿದಂತೆ ವಿಶ್ವನಾಥ ಭಟ್ಟ ದಂಪತಿ ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಈವರೆಗೂ ಪ್ರತಿದಿನ ಅಗ್ನಿಯನ್ನು ಕಾದಿಟ್ಟುಕೊಂಡು ಬಂದು ನಡೆಸಿದ ಔಪಾಸನಾ ಹೋಮ ಮತ್ತು ವೈಶ್ವದೇವ ಹೋಮ ಜರುಗಿದವು. ವೇದಿಕೆಯಲ್ಲಿ ಸ್ಮಾರ್ತಯಜ್ಞದಲ್ಲಿ ಬಳಕೆಯಾಗುವ ಪಾತ್ರೆ, ಪರಿಕರಗಳನ್ನು ಇಟ್ಟಿದ್ದು ವಿಶೇಷವಾಗಿತ್ತು.

ಹಿಂದೆ ವಿವಾಹಗಳು ಗೋವುಗಳ ಸನ್ನಿಧಿಯಲ್ಲೇ ಜರುಗುತ್ತಿತ್ತು ಎನ್ನುವ ಶಾಸ್ತ್ರಗಳ ಉಲ್ಲೇಖದ ಹಿನ್ನೆಲೆಯಲ್ಲಿ ಸಿದ್ಧಗೊಳಿಸಿದ ಸುಭಗ ವೇದಿಕೆಯಲ್ಲಿ ಕಪಿಲಾ ಹಸುವೂ ಸೇರಿದಂತೆ ಮನೆಯಲ್ಲಿ ಸಾಕಿದ ದೇಸಿ ಗೋವುಗಳ ಸಾನ್ನಿಧ್ಯವಿತ್ತು. ಇತ್ತೀಚೆಗೆ ವರನ ಬಳುವಳಿಗೆ ಗೋವಿನ ಚಿಕ್ಕ ಮೂರ್ತಿ ಅಥವಾ ಧನವನ್ನು ನೀಡುವ ಬದಲಾಗಿ ಸಾಕ್ಷಾತ್ ಗೋವು ಮತ್ತು ಕರುವನ್ನು ವಿಶ್ವನಾಥ ಭಟ್ಟ ದಂಪತಿ ಬಳುವಳಿಯಾಗಿ ನೀಡಿದರು.

ಕಣ್ಮರೆಯಾಗಿರುವ ಸನಾತನ ಧರ್ಮದ, ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವನ್ನು ಸ್ವತಃ ತಾವೇ ಅನುಸರಿಸುವ ಮೂಲಕ ಸಮಾಜಕ್ಕೆ ಮನಗಾಣಿಸಿದ್ದು ವಿಶ್ವನಾಥ ಭಟ್ಟ ದಂಪತಿ ಅವರ ಕಳಕಳಿಗೆ ಸಾಕ್ಷಿಯಾಗಿತ್ತು. ವಿಶ್ವನಾಥ ಭಟ್ಟರ ಮಾರ್ಗದರ್ಶಕರಾಗಿರುವ ವಿದ್ವಾಂಸ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ವಿ. ಗಂಗಾಧರ ಭಟ್ಟ ಅಗ್ಗೆರೆಯವರು ಸೇರಿದಂತೆ ಅನೇಕ ವಿದ್ವಾಂಸರು, ವೈದಿಕರು ಈ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.