ಚಿಕ್ಕಮಗಳೂರಿನ ತಾಲೂಕು ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಜಿಲ್ಲಾ ಸಂಘದ ಪದಾಧಿಕಾರಿಗಳು ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆಗ ಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು. ಪರಸಪ್ಪ ಕೂಸನೂರ, ಎಂ.ಆರ್.ಗAಗಾಧರ್, ಕಡೂರು ಭಾರ್ಗವ, ಕೃಷ್ಣಪೂಜಾರಿ, ರಾಧಾಕೃಷ್ಣ, ಶ್ರೀನಿವಾಸ್, ಚಂದ್ರಶೇಖರ್, ಅರುಣ್ ಸಾಗರ್, ಯೋಗೀಶ್ ಮತ್ತಿತರರಿದ್ದರು. 
ಜಿಲ್ಲೆ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾಲ್ನಡಿಗೆ ಜಾಥಾ

ಚಿಕ್ಕಮಗಳೂರು: ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆಗ ಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಜಿಲ್ಲಾ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶನಿವಾರ ಕಾಲ್ನಡಿಗೆ ಜಾಥಾ ನಡೆಸಿದರು.

ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿಸಲ್ಲಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪರಸಪ್ಪ ಕೂಸನೂರ, ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನ, ನಿವೃತ್ತಿ ವೇತನ ಸೇರಿದಂತೆ ಸೌಲಭ್ಯಗಳ ನಿಯಂತ್ರಣ ವಿಧೇಯಕ ೨೦೧೪ಕ್ಕೆ ತಿದ್ದುಪಡಿ ತಂದು ಅಥವಾ ರದ್ದುಪಡಿಸಿ ಭವಿಷ್ಯವರ್ತಿಯಾಗಿ ಜಾರಿಗೆ ಬರುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಚುನಾವಣಾ ಪೂರ್ವ ಪ್ರಣಾಳಿಕೆ ಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್‌ಪಿಎಸ್ ರದ್ದುಗೊಳಿಸಿ ಓಪಿ ಎಸ್ ಜಾರಿಗೆ ತರುವ ಭರವಸೆಯನ್ನು ನೀಡಿರುವ ಹಿನ್ನೆಲೆ ಕೂಡಲೇ ಓಪಿಎಸ್‌ನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
೨೦೦೬ರ ನಂತರ ಸೇವೆ ಸೇರಿದ ಸರ್ಕಾರಿ ನೌಕರರಿಗೆ ನೀಡಿರುವಂತೆ ಹಳೆಯ ಡಿಫೈನ್ಸ್ ಪಿಂಚಣಿ ಸೌಲಭ್ಯವನ್ನು ಅನುದಾನಿತ ಸಂಸ್ಥೆಗಳಲ್ಲಿರುವ ಸಮಾನ ಪ್ರಕರಣಗಳಿಗೂ ಸಹ ಅನ್ವಯಿಸಿ ಹಳೆಯ ನಿಶ್ಚಿತ ಪಿಂಚಣಿ ನೀಡಬೇಕು. ಓಪಿಎಸ್ ವಿಳಂಬವಾದಲ್ಲಿ ಸರ್ಕಾರಿ ನೌಕರರಿಗೆ ನೀಡುವ ರೀತಿಯಂತೆ ಎನ್‌ಪಿಎಸ್ ಯೋಜನೆಯನ್ನು ಯಥಾವತ್ತಾಗಿ ಅನುದಾನಿತ ನೌಕರರಿಗೂ ನೀಡಬೇಕು ಎಂದರು.
ವೈದ್ಯಕೀಯ ಸೌಲಭ್ಯಗಳಾದ ಆರೋಗ್ಯ ಸಂಜೀವಿನಿ ಸೌಲಭ್ಯ ತಾರತಮ್ಯವಿಲ್ಲದೇ ಜಾರಿಗೆ ಮುಂದಾಗಬೇಕು. ೨೦೦೨-೨೦ ರವರೆಗೆ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮರಣ, ನಿವೃತ್ತಿ, ರಾಜೀನಾಮೆ ಮತ್ತು ಇತರ ಕಾರಣಳಿಗಾಗಿ ಖಾಲಿಯಿರುವ ಶಿಕ್ಷಕ ಹುದ್ದೆಗಳನ್ನು ಭಡ್ತಿಗೆ ಅನುಮತಿಸಬೇಕು ಎಂದರು.
ಸರ್ಕಾರಿ ಶಾಲಾ ಕಾಲೇಜುಗಳ ಮತ್ತು ಅನುದಾನಿತ ಶಾಲಾ-ಕಾಲೇಜುಗಳ ಮಕ್ಕಳು ಹಾಗೂ ನೌಕರರುಗಳಿಗೆ ನೀಡುವ ಸೌಲಭ್ಯಗಳಲ್ಲಿ ಯಾವುದೇ ತಾರತಮ್ಯವನ್ನು ಮಾಡದಂತೆ ಸಮಾನವಾಗಿ ಹಂಚಬೇಕು. ಒಂದು ವೇಳೆ ಸೆ. ೫ರ ಶಿಕ್ಷಕರ ದಿನಾಚರಣೆ ಒಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಶಾಲಾ-ಕಾಲೇಜು ಬಂದ್ ಮಾಡಿ ರಾಜಧಾನಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಗೌರವಾಧ್ಯಕ್ಷ ಎಂ.ಆರ್.ಗAಗಾಧರ್, ಉಪಾಧ್ಯಕ್ಷ ಕಡೂರು ಭಾರ್ಗವ, ಪ್ರಧಾನ ಕಾರ್ಯದರ್ಶಿ ಕೃಷ್ಣಪೂಜಾರಿ, ಮುಖಂಡರಾದ ರಾಧಾಕೃಷ್ಣ, ಶ್ರೀನಿವಾಸ್, ಚಂದ್ರಶೇಖರ್, ಅರುಣ್ ಸಾಗರ್, ಯೋಗೀಶ್, ಹನುಮಂತಪ್ಪ, ಚನ್ನಬಸಪ್ಪ, ರಘು, ಶಿವಕುಮಾರ್ ಇದ್ದರು.