ಜಿಲ್ಲೆ

ಮನೆ ಮುಂದೆಯೇ ಅಡಗಿತ್ತು ಭಯಾನಕ ರಹಸ್ಯ! ಮಗನೆದುರು ಕಣ್ಣೀರಿಟ್ಟ ಅಪ್ಪನ ಅಸಲಿ ಮುಖವಾಡ ಬಯಲು

ಮಧುಗಿರಿ: ಸಂಬಂಧಿಕರೊಬ್ಬರ ತಿಥಿ ಕಾರ್ಯಕ್ಕೆಂದು ಹೋದ ನಿನ್ನ ಅಮ್ಮ, ವಾಪಸ್​ ಮನೆಗೂ ಬಂದಿಲ್ಲ ಕಣಪ್ಪ. ಸಂಬಂಧಿಕರ ಮನೆಗೂ ಹೋಗಿಲ್ಲವಂತೆ. ಎಲ್ಲಿಗೆ ಹೋಗಿದ್ದಾಳೋ ಗೊತ್ತಿಲ್ಲ. ನಾನೂ ಹುಡುಕುವೆ, ನೀನು ಹೋಗಿ ಹುಡುಕಿಕೊಂಡು ಬಾರಪ್ಪ ಎಂದು ಮಗನ ಎದುರು ತಂದೆ ಗೋಳಾಡುತ್ತಿದ್ದ. ಇದನ್ನು ನೋಡಿದವರಿಗೂ ಅಯ್ಯೋ ಪಾಪ, ಆಕೆ ಅದೆಲ್ಲಿ ಹೋದಳೋ... ಇವರ ಕಷ್ಟ ನೋಡಲಾಗ್ತಿಲ್ಲ ಎಂದು ಮಮ್ಮಲಮರುಗುತ್ತಿದ್ದರು. ಆದರೂ ಮಗನಿಗೆ ಸಣ್ಣದೊಂದು ಅನುಮಾನ ಕಾಡುತ್ತಿತ್ತು. ಯಾವುದಕ್ಕೂ ಇರಲಿ ಎಂದು ಆತ, ಪೊಲೀಸ್​ ಠಾಣೆ ಮೆಟ್ಟಿಲೇರುತ್ತಿದ್ದಂತೆ, ಮನೆ ಮುಂದೆಯೇ ಅಡಗಿದ್ದ ಕರಾಳ ರಹಸ್ಯ ಬಯಲಾಗಿದೆ. ಇದನ್ನು ನೋಡಿ ಮಗ ಸೇರಿದಂತೆ ಸ್ಥಳೀಯರೂ ಬೆಚ್ಚಿಬಿದ್ದಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಗರಣಿ ಗ್ರಾಮದ ಸಿದ್ದಪ್ಪ ಎಂಬುವರ ಪತ್ನಿ ಅಲಮೇಲಮ್ಮ(45) ಇತ್ತೀಚಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ತಾಯಿಗಾಗಿ ಹುಡುಕಾಡಿದ ಪುತ್ರ ರಂಜಿತ್​ಗೆ ಅಪ್ಪನ ಮೇಲೆಯೇ ಸಂಶಯ ದಟ್ಟವಾಗಿ ಕಾಡಿತ್ತು. ಪೊಲೀಸ್​ ಠಾಣೆಗೆ ಹೋಗಿ ದೂರು ಕೊಡುತ್ತಿದ್ದಂತೆ ಅಪ್ಪನ ಅಸಲಿ ಮುಖ ಬಯಲಾಗಿದೆ.

ಮಗನ ದೂರು ಆಧರಿಸಿ ತಂದೆ ಸಿದ್ದಪ್ಪನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಜಮೀನಿನ ವಿಚಾರವಾಗಿ ಪತ್ನಿಯನ್ನೇ ಕೊಂದು ಮನೆಯ ಮುಂಭಾಗ ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಆಕೆಯ ಸೀರೆ ಮತ್ತು ಮಾಂಗಲ್ಯ ಸರವನ್ನು ಸುಟ್ಟು ಹಾಕಿದ್ದಾಗಿ ಬಾಯ್ಬಿಟ್ಟಿದ್ದಾನೆ. ಸೋಮವಾರ ಕೊರಟಗೆರೆ ತಹಸೀಲ್ದಾರ್​ ನಾಹಿದಾ ಜಮ್​ಜಮ್​ ಮತ್ತು ಸಿಪಿಐ ಸರ್ದಾರ್​ ಸಮ್ಮುಖದಲ್ಲಿ ಶವವನ್ನು ಹೊರ ತೆಗೆದು ಪಂಚನಾಮೆ ನಡೆಸಲಾಯಿತು. ತನಿಖೆ ಮುಂದುವರಿದಿದೆ.