ಕಡೂರಿನ ಅಣ್ಣೀಗೆರೆ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಎ.ಎಂ.ತಮ್ಮಯ್ಯ ಅವರನ್ನು ಗ್ರಾಪಂ ಸದಸ್ಯರು ಅಭಿನಂದಿಸಿದರು. 
ಜಿಲ್ಲೆ

ಅಣ್ಣೀಗೆರೆ ಗ್ರಾಮ ಪಂಚಾಯಿತಿಗೆ ಎ.ಎಂ.ತಮ್ಮಯ್ಯ ಅಧ್ಯಕ್ಷ

ಕಡೂರು: ಅಣ್ಣೀಗೆರೆ ಗ್ರಾಪಂ ಅಧ್ಯಕ್ಷರಾಗಿ ಎ.ಎಂ.ತಮ್ಮಯ್ಯ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷ ಜಿ.ಡಿ.ಶಂಕರಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎ.ಎಂ.ತಮ್ಮಯ್ಯ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಡಾ. ಎಸ್.ಬಿ.ಉಮೇಶ್ ಅವಿರೋಧ ಆಯ್ಕೆ ಘೋಷಿಸಿದರು.
ಅಭಿನಂದನಾ ಸಭೆಯಲ್ಲಿ ಅಧ್ಯಕ್ಷ ಎ.ಎಂ.ತಮ್ಮಯ್ಯ ಮಾತನಾಡಿ, ಗ್ರಾಪಂ ಅಭಿವೃದ್ಧಿಗೆ ಸದಸ್ಯರ ಸಹಕಾರ ಮತ್ತು ಹಿರಿಯರ ಮಾಗದರ್ಶನ ಅಗತ್ಯ. ಮೂಲ ಸೌಕರ್ಯ ಒದಗಿಸುವ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಣ್ಣೀಗೆರೆ ಪಂಚಾಯಿತಿಯಲ್ಲಿ 1 ಕೋಟಿಗೂ ಅಧಿಕ ಮೊತ್ತದ ಸಮುದಾಯ ಕಾಮಗಾರಿ ನಿರ್ವಹಿಸಲಾಗಿದೆ. 50 ಲಕ್ಷ ರೂ.ವೆಚ್ಚದ ಪಂಚಾಯಿತಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಎರಡು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಜಿ.ಡಿ.ಶಂಕರಪ್ಪ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಎಲ್ಲ ಸದಸ್ಯರು ಒಂದು ಕುಟುಂಬದವರಂತೆ ಕೆಲಸ ಮಾಡಿಕೊಂಡು ಬರಲಾಗಿದೆ. ಇನ್ನು ಮುಂದೆಯೂ ಗ್ರಾಪಂ ಆಡಳಿತ ಇದೇ ರೀತಿ ಮುಂದುವರಿಯಬೇಕು. ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುವಂತಾಗಬೇಕು ಎಂದು ಹೇಳಿದರು.
ಉಪಾಧ್ಯಕ್ಷೆ ಎಸ್.ಜಿ.ಚಂದ್ರಮ್ಮ, ಸದಸ್ಯರಾದ ವೈ.ಡಿ.ಪ್ರೇಮ, ಗೀತಾ, ಪರ್ವೀನ್, ಭಾಗ್ಯ, ಮಲ್ಲಿಕಾರ್ಜುನ, ಎಸ್.ಎಂ.ಲಕ್ಷ್ಮೀದೇವಿ ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್, ಮುಖಂಡರಾದ ಎಸ್.ಪಿ.ರೇಣುಕಾರಾಧ್ಯ, ಯರದಕೆರೆ ರಾಜಪ್ಪ, ಎಸ್.ಡಿ.ನಿಂಗಪ್ಪ, ಪಾತೇನಹಳ್ಳಿ ಚೌಡಪ್ಪ, ಎಸ್.ವಿರೂಪಾಕ್ಷಪ್ಪ ಮತ್ತಿತರರಿದ್ದರು.