ಬೆಂಗಳೂರು: ಪ್ರೀತಿಸುವ ನಾಟಕವಾಡಿ ಯುವತಿಯರನ್ನ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಯುವಕನೊಬ್ಬ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ. ಇದ್ಯಾವದರ ಅರಿವೂ ಇಲ್ಲದೆ ಪ್ರೀತಿಯ ಅಮಲಲ್ಲಿ ತೇಲುತ್ತಿದ್ದ ಯುವತಿಯರಿಗೆ ಕಾದಿತ್ತು ಶಾಕ್!
ಆ ಖತರ್ನಾಕ್ ಯುವಕನ ಹೆಸರು ರಾಕೇಶ್ (26). ಈತ ಬ್ಯಾಡರಹಳ್ಳಿಯ ನಿವಾಸಿ. ಯುವತಿಯೊಬ್ಬಳು ಕೊಟ್ಟ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸರು ರಾಕೇಶ್‌ನನ್ನು ಬಂಧಿಸಿದ್ದಾರೆ. ಇವನ ಮೊಬೈಲ್ ಪರಿಶೀಲಿಸಿದಾಗ ಒಂದಲ್ಲ ಎರಡಲ್ಲ, ಬರೋಬ್ಬರಿ 6 ಯುವತಿಯರ ಖಾಸಗಿ ದೃಶ್ಯ ಸೆರೆ ಹಿಡಿದು ಅವರಿಗೆ ಹಿಂಸಿಸುತ್ತಿದ್ದ ಎಂಬುದು ಬಯಲಾಗಿದೆ.
ದೂರುದಾರೆ 24 ವರ್ಷದ ಸಂತ್ರಸ್ತೆ ನಗರದಲ್ಲಿ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದು, ಕೆಲ ತಿಂಗಳ ಹಿಂದೆ ಆರೋಪಿ ರಾಕೇಶ್‌ನ ಪರಿಚಯವಾಗಿತ್ತು. ರಾಕೇಶ್ ಪ್ರೀತಿಸುವುದಾಗಿ ಹೇಳಿ ಸಂತ್ರಸ್ತೆಗೆ ಪ್ರೇಮ ನಿವೇದನೆ ಮಾಡಿದ್ದ. ಆತ ನಿಜವಾಗಿಯೂ ಪ್ರೀತಿಸುತ್ತಿರಬಹುದು ಎಂದು ಭಾವಿಸಿದ ಯುವತಿ ಆತನ ಪ್ರೇಮನಿವೇದನೆಯನ್ನು ಒಪ್ಪಿಕೊಂಡಿದ್ದಳು. ನಂತರ ಇಬ್ಬರೂ ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆಕೆಯ ಗಮನಕ್ಕೆ ಬಾರದಂತೆ ತನ್ನ ಮೊಬೈಲ್‌ನಲ್ಲಿ ಖಾಸಗಿ ದೃಶ್ಯ ಸೆರೆ ಹಿಡಿದಿದ್ದ. ಕೆಲ ದಿನಗಳ ಬಳಿಕ ಯುವತಿಯ ವಾಟ್ಸ್ಆ್ಯಪ್‌ಗೆ ಖಾಸಗಿ ದೃಶ್ಯ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದ. ಆತಂಕಗೊಂಡ ಯುವತಿ ಆರೋಪಿಗೆ ಹಂತ-ಹಂತವಾಗಿ ಒಟ್ಟು 2 ಲಕ್ಷ ರೂ.ಗೂ ಅಧಿಕ ಹಣ ನೀಡಿದ್ದಳು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ. ಕಂಗಾಲಾದ ಸಂತ್ರಸ್ತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿ ರಾಕೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನಷ್ಟು ಯುವತಿಯರಿಗೆ ಇದೇ ಮಾದರಿಯಲ್ಲಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಆರೋಪಿಯು ಮೊದಲಿಗೆ ಯುವತಿಯರನ್ನು ಪರಿಚಯಿಸಿಕೊಳ್ಳುತ್ತಿದ್ದ. ನಂತರ ಅವರೊಂದಿಗೆ ಸಲುಗೆ ಬೆಳೆಸಿ ಪ್ರೀತಿಸುವ ನಾಟಕವಾಡುತ್ತಿದ್ದ. ಆತನ ಮಾತಿಗೆ ಮರುಳಾಗಿ ಪ್ರೀತಿ ಒಪ್ಪಿಕೊಂಡರೆ ಯುವತಿಯರೊಂದಿಗೆ ತಾನು ಸಲುಗೆಯಿಂದಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಆತನ ಮೊಬೈಲ್ ಪರಿಶೀಲನೆ ವೇಳೆ 5-6 ಯುವತಿಯರಿಗೆ ವಂಚಿಸಿರುವುದು ಕಂಡು ಬಂದಿದೆ. ಆದರೆ, ಮೋಸಕ್ಕೆ ಒಳಗಾದ ಇತರ ಯುವತಿಯರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.