ಹೊನ್ನಾಪುರ ಜನಕಲ್ಯಾಣ ವಸತಿ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಟ್ಟದಪುರ ವಲಯ ಕಚೇರಿ ವತಿಯಿಂದ ಆಯೋಜಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕಿರಣ್‌ಕುಮಾರ್, ಹರೀಶ್, ರುಕ್ಮಿಣಿ, ಕೆ.ಮಹದೇವ್ ಇದ್ದರು. 
ಜಿಲ್ಲೆ

ಧರ್ಮಸ್ಥಳ ಸಂಸ್ಥೆಯಿಂದ ಸಾಕಷ್ಟು ನೆರವು

ಲೋಕೇಶ್ ಮನು. ಡಿ

ಬೆಟ್ಟದಪುರ: ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಶಾಲೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ವಿವಿಧ ಯೋಜನೆಗಳ ಮೂಲಕ ಸಾಕಷ್ಟು ನೆರವು ನೀಡುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.

ಬೆಟ್ಟದಪುರ ಸಮೀಪದ ಹೊನ್ನಾಪುರ ಜನಕಲ್ಯಾಣ ವಸತಿ ಶಾಲೆಯಲ್ಲಿ ಇತ್ತಿಚೇಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಟ್ಟದಪುರ ವಲಯ ಕಚೇರಿ ವತಿಯಿಂದ ಆಯೋಜಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮ ಹಾಗೂ ಸಹಾಯ ಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಇದೂವರೆಗೆ 6,826 ಶಾಲೆಗಳಿಗೆ ಸುಮಾರು 11 ಕೋಟಿ ರೂ. ನೆರವವನ್ನು ನೀಡಿದ್ದಾರೆ. ಅಲ್ಲದೆ ಹಲವು ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ಯೋಜನೆ ವತಿಯಿಂದ ನೇಮಿಸಿ ಸಂಬಳ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾ.ಪಂ ಸದಸ್ಯರಾದ ಕಿರಣ್‌ಕುಮಾರ್, ಹರೀಶ್, ಒಕ್ಕೂಟದ ಅಧ್ಯಕ್ಷೆ ರುಕ್ಮಿಣಿ, ಜಿಲ್ಲಾ ಜನ ಜಾಗೃತಿ ಸದಸ್ಯ ಕೆ.ಮಹದೇವ್, ಮೇಲ್ವಿಚಾರಕ ವಿನಾಯಕ್ ಪೂಜಾರ್, ಶಿವರಾಜು, ಸೇವಾ ಪ್ರತಿನಿಧಿ ಸಣ್ಣೇಗೌಡ, ಗ್ರಾಮದ ಮುಖಂಡರಾದ ನಾಗರಾಜು ಇದ್ದರು.