ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಸಮೀಪ ಭಾನುವಾರ ಸಂಜೆ ಸಿಮೆಂಟ್ ಲಾರಿ ಮತ್ತು ಜೀಪಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ. ಸಾವಿಗೀಡಾದ ಒಬ್ಬೊಬ್ಬರದ್ದೂ ಒಂದೊಂದು ಕರುಣಾಜನಕ ಕಥೆ ಇದೆ.
ಜೀಪಿನ ಚಾಲಕ ರಾಯಲ್ಪಾಡು ರಮೇಶ್(49), ಸೊಣ್ಣಶೆಟ್ಟಹಳ್ಳಿಯ ನಾರಾಯಣಸ್ವಾಮಿ (60), ಗೌಪಲ್ಲಿಯ ಮುನಿರತ್ನ (50), ಆಂಧ್ರದ ಮದನಪಲ್ಲಿಯ ವೆಂಕಟಲಕ್ಷ್ಮಮ್ಮ (45), ಬೆಂಗಳೂರಿನ ಮುನಿಕೃಷ್ಣ (40), ಶ್ರೀನಿವಾಸಪುರ ತಾಲೂಕಿನ ಕುಸಂದ್ರದ ನಿಖಿಲ್ (35), ಬಳ್ಳಾರಿ ಜಿಲ್ಲೆಯ ಕೂಳಗಿಯ ಜೆಸಿಬಿ ಆಪರೇಟರ್ ರಾಜಪ್ಪ (28), ಈತನ ಪತ್ನಿ ಮೌನಿಕಾ (25) ಮೃತ ದುರ್ದೈವಿಗಳು. ಜೀಪಿನಲ್ಲಿ ಮಕ್ಕಳೂ ಸೇರಿ 17 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. 8 ಮಂದಿ ಸ್ಥಿತಿ ಗಂಭೀರವಾಗಿದ್ದಾರೆ. ಅಪಘಾತದಲ್ಲಿ ಪುಟ್ಟ ಕಂದನ ಕಣ್ಣೆದುರೇ ಅಪ್ಪ-ಅಮ್ಮ ಬಲಿಯಾಗಿದ್ದು, ಒಂದು ವರ್ಷದ ಮಗು ಅನಾಥವಾಗಿದೆ. ಕೂಲಿ ಕೆಲಸದಿಂದ ಬರುತ್ತಿದ್ದ ಕಾರ್ಮಿಕರ ಜೀವ ಕಿತ್ತ ಜವರಾಯ, ತಮ್ಮನ ಮಗನ ಮದುವೆ ಹೋಗುತ್ತಿದ್ದ ಅಜ್ಜಿಯ ಪ್ರಾಣವನ್ನೂ ಹೊತ್ತೊಯ್ದಿದ್ದಾನೆ.
ದಂಪತಿ ಸಾವು- ಮಗು ಅನಾಥ: ಜೀಪ್ ಹಾಗೂ ಲಾರಿ ಭೀಕರ ಅಪಘಾತದಲ್ಲಿ ಮೃತಪಟ್ಟವರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಟಿ ಸುವರನಹಳ್ಳಿ ಮೂಲದ ರಾಜಪ್ಪ(35) ಮತ್ತು ಮೌನಿಕಾ (25) ದಂಪತಿ ಇದ್ದಾರೆ. ಅಪಘಾತ ನಡೆದಾಗ ಈ ದಂಪತಿ ಜತೆ 1 ವರ್ಷದ ಮಗು ಕೂಡ ಇತ್ತು. ಮಗು ಕಾಲಿಗೆ ಗಾಯವಾಗಿದ್ದು, ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಜೆಸಿಬಿ ಚಾಲಕನಾಗಿದ್ದ ರಾಜಪ್ಪ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಈ ದಂಪತಿ ಚಿಂತಾಮಣಿ ಕಡೆ ಏಕೆ ಬಂದಿದ್ರು ಎಂಬುದು ತಿಳಿದುಬಂದಿಲ್ಲ.
ಮದುವೆಗೆ ಬಂದ ಅಜ್ಜಿ ಮಸಣ ಸೇರಿದ್ರು: ಅಪಘಾತದಲ್ಲಿ ಆಂಧ್ರ ಮೂಲದ ನಾರನ್ನಗಾರಪಲ್ಲಿಯ ವೆಂಕಟಲಕ್ಷ್ಮಮ್ಮ(59) ಮೃತಪಟ್ಟಿದ್ದಾಳೆ. ಇವರು ತನ್ನ ತಮ್ಮನ ಮಗನ ಮದುವೆಗೆಂದು ಪಕ್ಕದ ಮನೆಯ 8 ವರ್ಷದ ಬಾಲಕನನ್ನೂ ಕರೆದುಕೊಂಡು ಚಿಂತಾಮಣಿ ತಾಲೂಕಿನ ಮಿಂಡಿಗಲ್ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ರಾಯಲ್ಪಾಡುವಿನಿಂದ ಇದೇ ಜೀಪ್ ಮೂಲಕ ಚಿಂತಾಮಣಿಗೆ ಬರುತ್ತಿದ್ದರು. ಅಪಘಾತದಲ್ಲಿ ಅಜ್ಜಿ ತೀರಿಕೊಂಡಿದ್ದು, ಅದೃಷ್ಟವಶಾತ್ ಬಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ತಂದೆ ಸಾವಿನ ನಡುವೆ ಪರೀಕ್ಷೆ: ಅಪಘಾತದಲ್ಲಿ ತಂದೆ (ಜೀಪಿನ ಚಾಲಕ ರಮೇಶ್) ಮೃತಪಟ್ಟರೂ ಮಗ ಆರ್.ವಿಜಯ್ ಕುಮಾರ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಎಸ್ಸಿ (ಮೈಕ್ರೋ ಬಯಲಾಜಿಯ) ಅಂತಿಮ ವರ್ಷದ ಪರೀಕ್ಷೆ ಬರೆದು, ಬಳಿಕ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದಾನೆ. 2009ರಲ್ಲಿ ರಮೇಶ್ ಸ್ವಂತ ಬಳಕೆಗಾಗಿ ಜೀಪು ಖರೀದಿಸಿದ್ದರು. ಆದರೆ, ಬದುಕಿನ ಅನಿವಾರ್ಯತೆಗಾಗಿ ಪ್ರಯಾಣಿಕರ ಸಾಗಣೆ ಮಾಡುತ್ತಿದ್ದರು. ಇತ್ತೀಚೆಗೆ ಶ್ರೀನಿವಾಸಪುರದಲ್ಲಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಇದರಿಂದ ರಾಯಲ್ಪಾಡು ಮತ್ತು ಚಿಂತಾಮಣಿ ಮಾರ್ಗದಲ್ಲಿ ವಾಹನ ಓಡಿಸುತ್ತಿದ್ದರು ಎನ್ನಲಾಗಿದೆ.