ಬೇಲೂರು: ತಾಲೂಕಿನ ಬಿಕ್ಕೋಡು ಸುತ್ತಮುತ್ತಲ ಗ್ರಾಮಗಳಲ್ಲಿ ಈಗಾಗಲೇ ಕಾಡಾನೆಗಳ ಉಪಟಳದಿಂದ ಬೇಸತ್ತಿರುವ ಜನರು, ಈಗ ಒಂಟಿ ಕಾಡಾನೆ ಭಯ ಕಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ಸಾಗಿಸಬೇಕೆಂದು ಬಿಕ್ಕೋಡು, ಹುಸ್ಕೂರು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ತಾಲೂಕಿನಲ್ಲಿ ಸತತವಾಗಿ ಕಾಡಾನೆಗಳ ಉಪಟಳ ಹೇಳ ತೀರದಾಗಿದೆ. ಜತೆಗೆ ವಿವಿಧ ಗ್ರಾಮಗಳಲ್ಲಿ ಐದಾರು ಜನರು ಆನೆಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದರೆ, ಸಾಕಷ್ಟು ಜನರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ತಾಲೂಕಿನ ಬಿಕ್ಕೋಡು-ಅರೇಹಳ್ಳಿ ಹೋಬಳಿಗಳ ಹಲವಾರು ಗ್ರಾಮಗಳಲ್ಲಿ ಬೀಡುಬಿಟ್ಟಿರುವ 60ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ದಿನದಿಂದ ದಿನಕ್ಕೆ ಬೆಳೆ ನಾಶ ಪಡಿಸುತ್ತಿದೆ. ಕಾಡಾನೆಗಳು ಈಗಾಗಲೇ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ನಾಶಪಡಿಸಿ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತೆ ಮಾಡುವ ಮೂಲಕ ರೈತರ ನಿದ್ದೆ ಗೆಡಿಸಿವೆ.
ಇದರ ಜತೆಗೆ ಇದೀಗ ಹುಸ್ಕೂರು, ದರ್‌ಬಾರ್ ಪೇಟೆ, ಲಕ್ಕುಂದ, ಬಿಕ್ಕೋಡು ಗ್ರಾಮಗಳ ಸಮೀಪವೇ ಒಂಟಿ ಕಾಡಾನೆ ಕಳೆದ ಒಂದು ವಾರದಿಂದ ಓಡಾಡುತ್ತಿದೆ. ಇದರಿಂದಾಗಿ ತೋಟ, ಗದ್ದೆಗಳಲ್ಲಿ ಬೆಳೆ ನಾಶ ಮಾಡುತ್ತಿದೆ. ಇದರಿಂದಾಗಿ ಕೂಲಿ ಕಾರ್ಮಿಕರು, ರೈತರು ತೋಟಗಳಲ್ಲಿ ಕೆಲಸ ಮಾಡದಂತಾಗಿದೆ. ಜತೆಗೆ ಎಲ್ಲೆಂದರಲ್ಲಿ ನುಗ್ಗುವ ಒಂಟಿ ಆನೆಯ ಉಪಟಳ ಹಾಗೂ ಮನುಷ್ಯರನ್ನು ಕಂಡರೆ ದಿಟ್ಟಿಸುತ್ತಿದ್ದು, ಅವಘಡ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಒಂಟಿ ಕಾಡಾನೆಯನ್ನು ಓಡಿಸಲು ಮುಂದಾಗಬೇಕು ಗ್ರಾಮಸ್ಥರು ಒತ್ತಾಯಿಸಿದ್ದಾರೆ.