ಜಿಲ್ಲೆ

ದುರಸ್ತಿ ಭಾಗ್ಯವಿಲ್ಲದ ಸಂಪರ್ಕ ರಸ್ತೆ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ತಾಲೂಕು ಯಲ್ಲಾಪುರ ಗ್ರಾಮದಿಂದ ಸಿದ್ದಾಪುರ ಹಾಗೂ ಯಲ್ಲಾಪುರದಿಂದ ಸವಣೂರ ತಾಲೂಕಿನ ಇಚ್ಚಂಗಿ ಗ್ರಾಮದ ವರೆಗಿನ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶಾಲಾ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಓಡಾಡಲು ತೊಂದರೆಯಾಗಿದೆ. ನಿತ್ಯ ಭಯದಲ್ಲಿಯೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರು ಇದೇ ರಸ್ತೆಯಲ್ಲಿಯೇ ಹೊಲಗಳಿಗೆ ಹೋಗಿ ಬರಬೇಕಾಗಿದೆ. ಬೆಳೆ ಮಾರಾಟ ಮಾಡಲು ಮಾರುಕಟ್ಟೆಗೆ ಇದೇ ರಸ್ತೆಯಿಂದ ಹೋಗಬೇಕಾಗಿದೆ. ಆದರೆ ಸಂಪೂರ್ಣ ಹದಗೆಟ್ಟಿರುವ ರಸ್ತೆಯಿಂದ ಸಾರ್ವಜನಿಕರು, ರೈತರಿಗೆ ತೊಂದರೆ ಉಂಟಾಗುತ್ತಿದ್ದರೂ ಯಾವುದೇ ಕ್ರಮಗಳಾಗುತ್ತಿಲ್ಲ.
ಸವಣೂರು ತಾಲೂಕಿನ ಯಾವುದೇ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತಿಲ್ಲ. ಸವಣೂರಿನ ರೈಲ್ವೆ ಸ್ಟೇಷನ್‌ಗೆ ಹೋಗಲು ಅನಾನುಕೂಲವಾಗುತ್ತಿದೆ. ಈ ವಿಷಯವನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಕ್ಯಾರೆ ಎನ್ನುತ್ತಿಲ್ಲ. ಬರೀ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ರಸ್ತೆ ಅಭಿವೃದ್ಧಿಗಾಗಿ ಹಾವೇರಿ, ಶಿರಹಟ್ಟಿ ಕ್ಷೇತ್ರದ ಶಾಸಕರು ಹಾಗೂ ಸಂಸದರು ಅನುದಾನ ನೀಡಲು ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಯಲ್ಲಾಪುರ, ಇಂಚ್ಚಗಿ, ಸಿದ್ದಾಪುರ ಜನರ ಆಗ್ರಹವಾಗಿದೆ. ಒಂದು ತಿಂಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸಮಸ್ಯೆ ಸರಿಪಡಿಸಲು ವಿಫಲವಾದರೆ ರಸ್ತೆ ತಡೆ ನಡೆಸಿ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ. ಜುಂಜನಗೌಡ ನರಸಮ್ಮನವರ, ದೇವೀಂದ್ರಪ್ಪ ಮತ್ತೂರ, ಶಿವನಗೌಡ ಭರಮಗೌಡರ್, ದೇವೀಂದ್ರಪ್ಪ ಪ್ಯಾಟಿ, ಶೇಖಪ್ಪ ಅಂಗಡಿ, ಶಿವಪ್ಪ ಲಮಾಣಿ, ಬಸನಗೌಡ ಹರಕುಣಿ, ಬಸವಣ್ಣೆಪ್ಪ ಪ್ಯಾಟಿ ಇತರರಿದ್ದರು.