ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಶಿಥಿಲಾವಸ್ಥೆ ತಲುಪಿದ್ದ ಸಮೂಹ ಸಂಪನ್ಮೂಲ ಕೇಂದ್ರಗಳನ್ನು ಆಯಾ ಕ್ಲಸ್ಟರ್ ಮಟ್ಟದ ಶಿಕ್ಷಕ ಸಮೂಹವೇ ಸ್ವಯಂ ಪ್ರೇರಣೆಯಿಂದ ಲಕ್ಷಾಂತರ ರೂ. ಖುರ್ಚು ಮಾಡಿ ನವೀಕರಣಗೊಳಿಸುವ ಕಾರ್ಯ ಮಾಡುತ್ತಿದ್ದು ಜು.27 ರಂದು ನವೀಕರಣಗೊಂಡ ದೊಡ್ಡೂರಿನಲ್ಲಿನ ಸಮೂಹ ಸಂಪನ್ಮೂಲ ಕೇಂದ್ರದ ಉದ್ಘಾಟನೆ ಜರುಗಲಿದೆ.
ಆಯಾ ಕ್ಲಸ್ಟರ್ ಮಟ್ಟದ ಶಿಕ್ಷಕರ ತರಬೇತಿ, ಕಾರ್ಯಾಗಾರ, ಸಭೆ ಸೇರಿ ಇಲಾಖೆಯ ಇತರೆಲ್ಲ ಕಾರ್ಯಕ್ರಮಗಳ ಅನಕೂಲಕ್ಕಾಗಿ ದೊಡ್ಡೂರ, ಲಕ್ಷ್ಮೇಶ್ವರ, ಪು.ಬಡ್ನಿ, ಸೂರಣಗಿ, ಶಿಗ್ಲಿ ಒಟ್ಟು 5 ಕ್ಲಸ್ಟರ್ ವಿಭಾಗದಲ್ಲಿ 1997ರಲ್ಲಿ ಡಿಪಿಇಪಿ ಯೋಜನೆಯಡಿ ಈ ಕಟ್ಟಡಗಳು ನಿರ್ಮಾಣಗೊಂಡಿದ್ದವು.
ಆದರೆ, ಇವುಗಳ ನಿರ್ವಹಣೆ, ದುರಸ್ತಿಗಾಗಿ ಯಾವುದೇ ಅನುದಾನ ಇಲ್ಲದ್ದರಿಂದ ಕಾಲಕ್ರಮೇಣ ಈ ಕಟ್ಟಡಗಳು ಶಿಥಿಲಗೊಂಡು ನಿರುಪಯುಕ್ತ ಮತ್ತು ದುರುಪಯೋಗವಾಗಿದ್ದವು. ಹಾಳಾಗುತ್ತಿರುವ ಕಟ್ಟಡಗಳನ್ನು ದುರಸ್ತಿಪಡಿಸುವ ಬಗ್ಗೆ ಆಸಕ್ತಿ ತೋರಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿಆರ್‌ಪಿಗಳು ನೀಡಿದ ಸಲಹೆ-ಸೂಚನೆಯಿಂದ ಪ್ರೇರಿತರಾದ ಆಯಾ ಕ್ಲಸ್ಟರ್ ಸಿಆರ್‌ಪಿಗಳು ಸ್ಥಳೀಯ ಗ್ರಾಪಂ, ಸಂಬಂಧಿತ ಮುಖ್ಯ ಶಿಕ್ಷಕರು, ಶಿಕ್ಷಕರ ಸಹಾಯ-ಸಹಕಾರದಿಂದ ಈ ಕಟ್ಟಡಗಳಿಗೆ ಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡೂರಿನಲ್ಲಿನ ಸಿಆರ್‌ಸಿ ಕೇಂದ್ರವನ್ನು ಸಿಆರ್‌ಪಿ ಆರ್.ಎಚ್ ರಾಜೂರ ಅವರ ನೇತೃತ್ವದಲ್ಲಿ ಎಲ್ಲರ ಸಹಕಾರದಿಂದ 1 ಲಕ್ಷ ರೂ.ಗಿಂತ ಹೆಚ್ಚಿನ ಹಣ ಖರ್ಚು ಮಾಡಿ ನವೀಕರಣಗೊಳಿಸಿದ್ದಾರೆ. ಪು.ಬಡ್ನಿಯಲ್ಲಿ ಹಾಳಾಗಿದ್ದ ಕಟ್ಟಡವನ್ನು ಸಿಆರ್‌ಪಿ ಗಿರೀಶ ನೇಕಾರ 1.5 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳಿಸಿದ್ದಾರೆ. ಶಿಗ್ಲಿಯಲ್ಲಿ ಜ್ಯೋತಿ ಗಾಯಕವಾಡ, ಲಕ್ಷ್ಮೇಶ್ವರದಲ್ಲಿ ಉಮೇಶ ನೇಕಾರ, ಸೂರಣಗಿಯಲ್ಲಿನ ಕಟ್ಟಡವನ್ನು ಲೊಕೇಶ ಮಠದ ನೇತೃತ್ವದಲ್ಲಿ ನವೀಕರಣಕ್ಕೆ ಅಣಿಯಾಗಿರುವುದು ಶ್ಲಾಘನೀಯ.
ಶಾಲೆಯನ್ನೇ ದೇವಾಲಯವೆಂದು, ಮಕ್ಕಳನ್ನೇ ದೇವರೆಂದು ಪೂಜ್ಯನೀಯ ಭಾವನೆಯಿಂದ ಶಿಕ್ಷಣ ಸೇವೆ ಮಾಡುವ ಶಿಕ್ಷಕರು ತಮ್ಮ ಒಂದು ಸಲಹೆಯನ್ನು ಅತ್ಯಂತ ಆಸಕ್ತಿಯಿಂದ ಸ್ವೀಕರಿಸಿ ಕ್ಷೇತ್ರವ್ಯಾಪ್ತಿಯಲ್ಲಿ ಶಿಥಿಲಗೊಳ್ಳುತ್ತಿರುವ ಸಿಆರ್‌ಸಿ ಕಟ್ಟಡಗಳನ್ನು ತಮ್ಮ ಸ್ವಂತದ ಮತ್ತು ಅಲ್ಪ ದಾನಿಗಳ ಸಹಾಯದಿಂದ ಅಭಿವೃದ್ಧಿಗೊಳಿಸುವ ಮೂಲಕ ಇಲಾಖೆಯ ಅಳಿಲು ಸೇವೆ ಮಾಡಿರುವುದು ಖುಷಿ ತಂದಿದೆ. ಪಾಲುದಾರ ಎಲ್ಲ ಸಿಆರ್‌ಪಿ ಮತ್ತು ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸುವೆ.ಜಿ.ಎಂ. ಮುಂದಿನಮನಿ- ಬಿಇಒ