ಮಂಡ್ಯ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ಯುಜಿಸಿ ನಿಯಮಾವಳಿಯಂತೆ ಏಕಕಾಲಕ್ಕೆ ದ್ವಿ ಪದವಿ ಪಡೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದೆ ಎಂದು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ತಿಳಿಸಿದರು.
ನಗರದ ಮುಕ್ತ ವಿವಿ ಪ್ರಾದೇಶಿಕ ಕಚೇರಿಯಲ್ಲಿ ಪ್ರವೇಶಾತಿಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ಮುಕ್ತ ವಿವಿಯಲ್ಲಿ ವಿದ್ಯಾರ್ಥಿಗಳು ಯಾವುದೇ ಪದವಿಯನ್ನು ಅಧ್ಯಯನ ಮಾಡುತ್ತಲೇ ಮತ್ತೊಂದು ಪದವಿ ಪಡೆಯುವಂತೆ ಯುಜಿಸಿ ಅನುಕೂಲ ಮಾಡಿಕೊಟ್ಟಿದೆ. ಬಿಎ, ಬಿ.ಕಾಂ, ಬಿಎಸ್ಸಿ ಪದವಿಯನ್ನು ಪ್ರತ್ಯೇಕವಾಗಿ ವ್ಯಾಸಂಗ ಮಾಡುತ್ತಿರುವವರು ಜತೆಯಲ್ಲೇ ದ್ವಿ ಪದವಿಯನ್ನು ಅಧ್ಯಯನ ಮಾಡಬಹುದು. ಯಾವುದೇ ಸ್ನಾತಕೋತ್ತರ ಪದವಿ ಪಡೆಯುತ್ತಲೇ ಮತ್ತೊಂದು ಸ್ನಾತಕೋತ್ತರ ಪದವಿಯನ್ನೂ ಒಮ್ಮೆಲೇ ಪಡೆಯಬಹುದು ಎಂದು ವಿವರಿಸಿದರು.
ಇದಲ್ಲದೆ, ಮೊದಲ ಬಾರಿಗೆ ಶುಲ್ಕ ಪಾವತಿಗೆ ಇಎಂಐ ಅವಕಾಶವನ್ನೂ ನೀಡಲಾಗಿದೆ. ಆಟೋ ಮತ್ತು ಕ್ಯಾಬ್ ಚಾಲಕರ ಮಕ್ಕಳಿಗೆ ಶುಲ್ಕದಲ್ಲಿ ಶೇ.30 ವಿನಾಯಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಹೆಚ್ಚು ಪ್ರವೇಶ ಪಡೆದು ಸಂಖ್ಯೆ ಹೆಚ್ಚಳವಾದಲ್ಲಿ ಮುಂದಿನ ದಿನಗಳಲ್ಲಿ ವೃತ್ತಿಪರರಿಗೆ ಮತ್ತಷ್ಟು ವಿನಾಯಿತಿ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಆನ್ಲೈನ್ ಮುಖಾಂತರ ಈ- ಲರ್ನಿಂಗ್ ಮೆಟೀರಿಯಲ್ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.15 ರಿಯಾಯಿತಿ ನೀಡಲಾಗಿದೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಇನ್ನು ಕರೊನಾದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದರು.
ಯೂಟ್ಯೂಬ್ನಲ್ಲಿಯೇ ಪಾಠ: ವಿವಿಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು ಯೂಟ್ಯೂಬ್ನಲ್ಲೂ ಪಾಠ-ಪ್ರವಚನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಪಾಠಗಳನ್ನು ಕೇಳಲಾಗದಿದ್ದಲ್ಲಿ, ಯೂಟ್ಯೂಬ್ಗಳಲ್ಲಿ ಅಪ್ಲೋಡ್ ಮಾಡಿರುತ್ತೇವೆ. ಅದನ್ನು ಯಾವ ಸಮಯದಲ್ಲಾದರೂ ಕೇಳಬಹುದಾಗಿದೆ. ಇನ್ನು ಜ್ಞಾನಪೀಠ ಪುರಸ್ಕೃತರ ಬಗ್ಗೆ ಉಪನ್ಯಾಸ ಮಾಲಿಕೆಯನ್ನು ಪ್ರಾರಂಭಿಸಲಾಗುತ್ತಿದ್ದು, ಇದು ಕೂಡ ಆನ್ಲೈನ್ನಲ್ಲಿ ಲಭ್ಯವಿರುತ್ತದೆ. ಕಲಾ, ವಾಣಿಜ್ಯ ವಿಭಾಗಗಳಿಗಷ್ಟೇ ಮಾನ್ಯತೆ ನೀಡದೆ ಇದೀಗ ವಿಜ್ಞಾನ ವಿಭಾಗಕ್ಕೂ ಪ್ರಾಧಾನ್ಯತೆ ನೀಡಲಾಗಿದೆ. ಸುಸಜ್ಜಿತ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಸಂಶೋಧನೆಗೂ ಒತ್ತು ನೀಡುವ ಸಲುವಾಗಿ ಇಸ್ರೋ ಮತ್ತು ಡಿಆರ್ಡಿಒನಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈಗಾಗಲೇ ಯುಜಿಸಿ ಮಾನ್ಯತೆ ದೊರೆತಿದ್ದು, ಎಂಎಚ್ಆರ್ಡಿ ಯೋಜನೆಯಡಿ 3 ಕೋಟಿ ರೂ. ಅನುದಾನ ಬಂದಿದೆ. ನ್ಯಾಕ್ ಮಾನ್ಯತೆಗಾಗಿ ಎಲ್ಲ ದಾಖಲಾತಿಗಳನ್ನೂ ಸಲ್ಲಿಸಲಾಗಿದೆ ಎಂದು ಹೇಳಿದರು.
ಲಕ್ಷ ವಿದ್ಯಾರ್ಥಿಗಳ ಪ್ರವೇಶದ ಗುರಿ: ಕಳೆದ ವರ್ಷ 25 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ಈ ಬಾರಿ 1 ಲಕ್ಷ ವಿದ್ಯಾರ್ಥಿಗಳ ಪ್ರವೇಶ ನಿರೀಕ್ಷಿಸಲಾಗಿದೆ. ಅಂತೆಯೇ, ಮಂಡ್ಯ ಜಿಲ್ಲೆಯಲ್ಲಿ 1,200 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ಈ ಬಾರಿ 5 ಸಾವಿರಕ್ಕೂ ಹೆಚ್ಚು ಜನರು ಪ್ರವೇಶ ಪಡೆಯಬಹುದೆಂಬ ನಿರೀಕ್ಷೆ ಇದೆ. ಈ ಬಾರಿ ದ್ವಿ ಪದವಿಗೆ ಅವಕಾಶ ನೀಡಿರುವುದರಿಂದ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಂಡ್ಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸುಧಾಕರ್ ಹೊಸಳ್ಳಿ ಇದ್ದರು.
ಎಲ್ಲ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವೆ. ಪರೀಕ್ಷೆಯಲ್ಲಿ ಅಕ್ರಮ ತಡೆಗೆ ಸರ್ಕಾರಿ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಂಡು ಸರ್ಕಾರಿ ಉಪನ್ಯಾಸಕರು, ಶಿಕ್ಷಕರನ್ನೇ ಮೇಲ್ವಿಚಾರಕರಾಗಿ ನಿಯೋಜಿಸಲಾಗುತ್ತದೆ. ಒಂದು ವೇಳೆ ಪರೀಕ್ಷಾ ಅಕ್ರಮ ನಡೆದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲೂ ಅವಕಾಶವಿದೆ.
|ಪ್ರೊ.ಎಸ್.ವಿದ್ಯಾಶಂಕರ್ ಕೆಎಸ್ಒಯು ಕುಲಪತಿ