ಜಿಲ್ಲೆ

ತುಂಬರಗಿ ಕಾಡಲ್ಲಿ ನರಿ ಬೇಟೆಯಾಡಿದ ಚಿರತೆ

ಬಸವರಾಜ ವೀರಪ್ಪ ಗರಗ

ಮುಂಡಗೋಡ: ಚಿರತೆಯೊಂದು ನರಿಯನ್ನು ಬೇಟೆಯಾಡಿ ಮುಖದ ಭಾಗ ತಿಂದು ದೇಹವನ್ನು ಹಾಗೆ ಬಿಟ್ಟಿರುವ ಘಟನೆ ತಾಲೂಕಿನ ತುಂಬರಗಿ ಗ್ರಾಮದ ಸನಿಹದ ಅರಣ್ಯದಲ್ಲಿ ಬುಧವಾರ ನಡೆದಿದೆ.

ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬರಗಿ ಗ್ರಾಮದ ಸನಿಹದ ಅರಣ್ಯ ಪ್ರದೇಶಕ್ಕೆ ತಾಗಿ ಅತಿಕ್ರಮಣ ಜಮೀನುಗಳಿದ್ದು, ರೈತರು ಬೇಸಿಗೆ ಬೆಳೆ ಬೆಳೆದಿದ್ದಾರೆ. ರೈತರೊಂದಿಗೆ ಗದ್ದೆಗೆ ಬರುತ್ತಿದ್ದ ಸಾಕು ನಾಯಿಗಳನ್ನು ಸಹ ಈ ಹಿಂದೆ ಚಿರತೆತಿಂದು ಹಾಕಿದೆ. ಅಲ್ಲದೆ ಸಂಜೆ ವೇಳೆಯಲ್ಲಿ ಅರಣ್ಯದಂಚಿನ ರೈತರಿಗೆ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದೆ. ಬುಧವಾರ ಚಿರತೆ ನರಿಯನ್ನು ಬೇಟೆಯಾಡಿ ಮರದ ಮೇಲೆ ತೆಗೆದುಕೊಂಡು ಹೋಗಿದೆ. ನಂತರ ನರಿಯ ಮುಖದ ಭಾಗ ತಿಂದು ದೇಹವನ್ನು ಮರಕ್ಕೆ ನೇತು ಹಾಕಿದೆ. ಇದನ್ನು ಕಂಡು ಗ್ರಾಮಸ್ಥರು ಹಾಗೂ ರೈತರು ಭೀತಿಗೊಳಗಾಗಿದ್ದಾರೆ.

ಇಲಾಖೆಯಿಂದ ಜಾಗೃತಿ: ಚಿರತೆ ನರಿಯನ್ನು ಬೇಟೆಯಾಡಿರುವ ಸುದ್ದಿ ತಿಳಿದು ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆಯವರು ರೈತರು ಬೆಳಗ್ಗೆ ಹಾಗೂ ಸಂಜೆ ವೇಳೆ ಅರಣ್ಯದತ್ತ ತೆರಳಬಾರದು ಹಾಗೂ ಚಿರತೆ ಕಂಡ ತಕ್ಷಣವೇ ಇಲಾಖೆಯವರಿಗೆ ಮಾಹಿತಿ ನೀಡಬೇಕು ಚಿರತೆಯ ಹೆಜ್ಜೆ ಗುರುತು ಗಮನಿಸುವಂತೆ ತಿಳಿಸಿದ್ದಾರೆ.