ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿರುವ ಚಿರತೆ.  
ಜಿಲ್ಲೆ

ಬೋನಿಗೆ ಬಿದ್ದ ಚಿರತೆ

ಅಭಿನಯ್ ಎಚ್.ಎಂ

ಎಚ್.ಡಿ.ಕೋಟೆ: ಪಟ್ಟಣದ ಸಮೀಪವಿರುವ ಜಮೀನಿನ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ 7 ವರ್ಷದ ಗಂಡು ಚಿರತೆ ಸೆರೆಯಾಗಿದೆ.

ಪಟ್ಟಣದ ಹೌಸಿಂಗ್ ಬೋರ್ಡ್‌ಗೆ ಹೊಂದಿಕೊಂಡಂತಿರುವ ಜಮೀನಿನ ರೈತರಾದ ದಶರಥ, ವಿವೇಕ, ಗುರುಮಲ್ಲು, ಸಣ್ಣಪ್ಪ, ಸೋಮಣ್ಣ, ಸಣ್ಣಯ್ಯ ಅವರ ಜಮೀನಿನಲ್ಲಿ ಎರಡ್ಮೂರು ವರ್ಷಗಳಿಂದ ಚಿರತೆಗಳ ಹಾವಳಿ ಹೆಚ್ಚಾಗಿತ್ತು. ಈ ಚಿರತೆಗಳು ಈ ಭಾಗದಲ್ಲಿ ಹಸು, ಕರು ಮೇಕೆ ನಾಯಿಗಳನ್ನು ತಿಂದು ಹಾಕಿತ್ತಿತ್ತು. ಅಲ್ಲದೆ ರೈತರು ರಾತ್ರಿ ಸಮಯದಲ್ಲಿ ಜಮೀನಿಗೆ ತೆರಳಿ ನೀರು ಹರಿಸಲು ಭಯಪಡುತ್ತಿದ್ದರು.

ಈ ಬಗ್ಗೆ ಅರಣ್ಯ ಇಲಾಖೆಯ ಎಚ್.ಡಿ.ಕೋಟೆ ಆರ್‌ಎಫ್ ಪೂಜಾ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುಮಲ್ಲು ಅವರ ಜಮೀನಿನಲ್ಲಿ ಬೋನು ಇರಿಸಿದ್ದರು. ಬೋನಿನಲ್ಲಿ ಇರಿಸಿದ್ದ ನಾಯಿಯನ್ನು ತಿನ್ನಲು ಮಂಗಳವಾರ ರಾತ್ರಿ ಬಂದ ಭಾರಿ ಗಾತ್ರದ ಏಳು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.

ಬೋನಿನಲ್ಲಿ ಹದಿನೈದು ದಿನಗಳ ಹಿಂದೆ ಎರಡು ಗಂಡು ಚಿರತೆ ಸೆರೆಯಾಗಿದ್ದವು. ಆದರೂ ಮತ್ತೆ ಈ ಭಾಗದ ಜಮೀನು ಮತ್ತು ಮನೆಗಳ ಸಮೀಪ ಚಿರತೆಗಳು ಓಡಾಟ ಹೆಚ್ಚಾಗಿತ್ತು. ಚಿರತೆ ಸೆರೆಯಾಗುತ್ತಿದಂತೆ ಜತೆಯಲ್ಲಿದ್ದ ಚಿರತೆ ಮತ್ತು ಮರಿಗಳು ಬೋನಿನ ಸುತ್ತ ಸುತ್ತಾಡಿ ಬೋನಿನ ಮೇಲೆ ಹಾಕಿದ್ದ ಹುಲ್ಲನ್ನು ಎಳೆದು ಹಾಕಿವೆ.

ಈ ಭಾಗದಲ್ಲಿ ಮೂರ್ನಾಲ್ಕು ಚಿರತೆಗಳಿದ್ದು ಬೋನು ಇರಿಸುವಂತೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದರು. ಚಿರತೆ, ಬೋನಿಗೆ ಬಿದ್ದ ವಿಚಾರ ತಿಳಿದು ಚಿರತೆಯನ್ನು ನೋಡಲು ಜನಸಾಗರವೇ ಹರಿದು ಬಂತು.

ವಲಯಾರಣ್ಯಾಧಿಕಾರಿ ಪೂಜಾ ಮಾತನಾಡಿ, ವೈದ್ಯರು ಚಿರತೆಯ ಆರೋಗ್ಯ ಪರೀಕ್ಷಿಸಿದ ನಂತರ ಕಾಡಿಗೆ ಬಿಡಲಾಗುವುದು ಎಂದರು. ಉಪ ವಲಯಾರಣ್ಯಾಧಿಕಾರಿ ಪರಮೇಶ್ ಮತ್ತು ಚಿರತೆ ಕ್ಷಿಪ್ರ ರಕ್ಷಣಾ ಪಡೆ ಸಿಬ್ಬಂದಿ ಇದ್ದರು.