ಜಿಲ್ಲೆ

ಬೋನಿಗೆ ಬಿದ್ದ ಚಿರತೆ

ಚಾಮರಾಜನಗರ: ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ 15 ದಿನಗಳಿಂದ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಶನಿವಾರ ಬೋನಿಗೆ ಬಿದ್ದಿದೆ.


ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನಪಾಳ್ಯ ಗ್ರಾಮದಲ್ಲಿ ಫೆ.27 ರಂದು ಪಾಸ್ಕಲ್ ಮೇರಿ ಅವರ ಕೊಟ್ಟಿಗೆಗೆ ನುಗ್ಗಿ ನಾಲ್ಕು ಮೇಕೆಗಳನ್ನು ಚಿರತೆ ಕೊಂದಿತ್ತು. ಜತೆಗೆ ಗ್ರಾಮದ ಆಸುಪಾಸು ಹಾಗೂ ಜಮೀನಿನಲ್ಲಿ ಅಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿತ್ತು.

ರಾತ್ರಿ ವೇಳೆ ರೈತರು ಕಾವಲು ಕಾಯಲು ಜಮೀನಿಗೆ ತೆರಳಲು ತುಂಬಾ ಹೆದರುವಂತಾಗಿತ್ತು. ಈ ದಿಸೆಯಲ್ಲಿ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರಿಂದ ಅರಣ್ಯ ಇಲಾಖೆ ಗ್ರಾಮದ ಆಸುಪಾಸಿನಲ್ಲಿ ಬೋನು ಇರಿಸಿ ಸಿಬ್ಬಂದಿ ನಿಯೋಜಿಸಲಾಗಿತ್ತು.


ಶನಿವಾರ ಬೆಳಗಿನ ಜಾವ ಬೋನಿನಲ್ಲಿ ಚಿರತೆ ಸೆರೆಯಾಗಿತ್ತು. ಇದನ್ನು ಕಂಡ ಅರಣ್ಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆರ್‌ಎಫ್‌ಒ ಶಾಂತರಾಜು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಇತ್ತ ಚಿರತೆಯನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು.

ಈ ವೇಳೆ ಗ್ರಾಮಸ್ಥರು ಸೆರೆಯಾಗಿರುವ ಚಿರತೆಯನ್ನು ಬೇರೆಡೆಗೆ ಬಿಡುವಂತೆ ಒತ್ತಾಯಿಸಿದಾಗ ಆರ್‌ಎಫ್‌ಒ ಈ ಬಗ್ಗೆ ಅಗತ್ಯ ಕ್ರಮವಹಿಸುದಾಗಿ ಭರವಸೆ ನೀಡಿದರು.