ಜಿಲ್ಲೆ

ಬೋನಿನಲ್ಲಿ ಸೆರೆಯಾದ ಚಿರತೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

 ದಾಬಸ್‌ಪೇಟೆ: ನರಸೀಪುರ ಪಂಚಾಯಿತಿ ವ್ಯಾಪ್ತಿಯ ಕೆರೆಪಾಳ್ಯ ಬಳಿ ಬಂಡೆ ಮೇಲೆ ಎರಡು ದಿನಗಳಿಂದ ಕಾಣಿಸಿಕೊಂಡು ಆತಂಕ ಮೂಡಿಸಿದ್ದ 7 ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಶನಿವಾರ ಸೆರೆಯಾಗಿದೆ.

ನ.27ರ ಸಂಜೆ ಬಂಡೆ ಮೇಲೆ ಚಿರತೆ ಕಾಣಿಸಿಕೊಂಡಿತ್ತು. ಈ ದೃಶ್ಯವನ್ನು ಗ್ರಾಮಸ್ಥರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ನ.30ರಂದು ಮತ್ತೆ ಅದೇ ಭಾಗದಲ್ಲಿ ಚಿರತೆ ಇರುವುದನ್ನು ನೋಡಿದ್ದ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಹಾಗೆಯೇ ಅಧಿಕಾರಿಗಳು ಡಿ.5ರಂದು ಬೆಟ್ಟಕ್ಕೆ ಹೊಂದಿಕೊಂಡಂತೆ ಬೋನು ಅಳವಡಿಸಿದ್ದರು.

4ನೇ ಚಿರತೆ: ಸೋಂಪುರ ಹೋಬಳಿಯಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ. ಕಂಬಾಳು ಗೊಲ್ಲರಹಟ್ಟಿಯಲ್ಲಿ ಕರಿಯಮ್ಮ ಎಂಬ ಮಹಿಳೆಯನ್ನು ಚಿರತೆ ಕೊಂದಿತ್ತು. ಅರಣ್ಯ ಇಲಾಖೆಯು ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ 9 ಬೋನು ಇಟ್ಟು ಮೂರು ಚಿರತೆಗಳನ್ನು ಸೆರೆ ಹಿಡಿದಿದೆ. ಕೆರೆಪಾಳ್ಯ ಗ್ರಾಮದಲ್ಲಿ ಸೆರೆ ಸಿಕ್ಕಿರುವುದು ಸೋಂಪುರ ಹೋಬಳಿಯಲ್ಲಿ ನಾಲ್ಕನೇ ಚಿರತೆ ಆಗಿದೆ.

ಕೊಟ್ಟಿಗೆಯಲ್ಲಿದ್ದ ಹಸು ಮೇಲೆ ದಾಳಿ

ಮಧುರೆ: ದೊಡ್ಡಬಳ್ಳಾಪುರ ತಾಲೂಕಿನ ತಂಬೇನಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ, ಹಸುವಿನ ರುಂಡ-ಮುಂಡ ಬೇರ್ಪಡಿಸಿ ಅರೆಬರೆ ತಿಂದು ಪರಾರಿಯಾಗಿದೆ. ರೈತ ನಂಜಪ್ಪ ಶನಿವಾರ ಬೆಳಗ್ಗೆ ಹಾಲು ಕರೆಯಲು ಕೊಟ್ಟಿಗೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.