ಮೇಲುಕೋಟೆಯ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬದಲ್ಲಿ ತೆರೆದ ಸ್ಟಾಲ್‌ಗಳ ಪೈಕಿ ಕಥೆಕಟ್ಟುವ ಸ್ಟಾಲ್ ಮಕ್ಕಳನ್ನು ಆಕರ್ಷಿಸಿತು. 
ಜಿಲ್ಲೆ

ಮಕ್ಕಳ ಗಮನಸೆಳೆದ ಕಲಿಕಾ ಹಬ್ಬ

ಮೇಲುಕೋಟೆ: ಮೇಲುಕೋಟೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಶೈಕ್ಷಣಿಕ ವೃತ್ತದ ವಿವಿಧ ಶಾಲೆಗಳ ಒಂದರಿಂದ ಐದನೇ ತರಗತಿವರೆಗಿನ ನೂರಾರು ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯವನ್ನು ಅನಾವರಣಗೊಳಿಸಿದರು.

ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಟ್ಟಿ ಓದು, ಕಥೆ ಕಟ್ಟು, ಕೈಬರಹ ಮತ್ತು ಕ್ಯಾಲಿಗ್ರಫಿ, ಸಂತೋಷದಾಯಕ ಗಣಿತ, ನೆನಪಿನ ಪರೀಕ್ಷೆ, ರಸಪ್ರಶ್ನೆ, ಪಾಲಕರೊಂದಗೆ ಮಕ್ಕಳ ಸಂಬಂಧ ವಿಷಯಗಳನ್ನು ನಿಗದಿ ಮಾಡಿ 7 ಕೊಠಡಿಗಳಲ್ಲಿ ಸ್ಟಾಲ್‌ಗಳನ್ನು ತೆರೆದು ಮಕ್ಕಳ ಬುದ್ಧಿಮತ್ತೆ ಪರೀಕ್ಷಿಸುವ ಕಾರ್ಯ ಮಾಡಲಾಗಿತ್ತು. ಮಕ್ಕಳು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಮಕ್ಕಳ ಸ್ಪರ್ಧೆಗಾಗಿ ತೆರೆದ ಸ್ಪಾಲ್‌ಗಳ ಪೈಕಿ ನ್ಯಾಮನಹಳ್ಳಿ ಶಾಲೆಯ ಜ್ಯೋತಿ ಹಾಗೂ ಬಳಿಘಟ್ಟ ಶಾಲೆಯ ಮುಖ್ಯಶಿಕ್ಷಕಿ ತೆರೆದ ಕಥೆಗಳ ಸ್ಟಾಲ್‌ಗಳು ಎಲ್ಲರ ಗಮನ ಸೆಳೆದವು.

ಮಕ್ಕಳ ಕನಿಷ್ಠ ಸಾಮರ್ಥ್ಯ ಬೆಳವಣಿಗೆಗಾಗಿ ವರ್ಷವಿಡೀ ಕಲಿತ ಎಫ್‌ಎಲ್‌ಎನ್ ಚಟುವಟಿಕೆಯನ್ನು ಮತ್ತಷ್ಟು ಉತ್ತೇಜಿಸಲು ಪಾಂಡವಪುರ ತಾಲೂಕಿನ ಎಲ್ಲ ಕ್ಲಸ್ಟರ್‌ಗಳಲ್ಲಿ ಎರಡು ಹಂತದಲ್ಲಿ ಕಲಿಕಾ ಹಬ್ಬ ಆಯೋಜಿಸಲಾಗಿದೆ.

ಆಯ್ದ ಒಂದೊಂದು ಶಾಲೆಯಲ್ಲಿ ಕಾರ್ಯಕ್ರಮ ನಿಗದಿ ಮಾಡಲಾಗಿದೆ ಎಂದು ಪಾಂಡವಪುರ ತಾಲೂಕು ಕೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಮತ್ತು ಸಮನ್ವಯಾಧಿಕಾರಿ ಪ್ರಕಾಶ್ ತಿಳಿಸಿದರು.

ಕಲಿಕಾ ಹಬ್ಬವನ್ನು ಮೇಲುಕೋಟೆ ಬಾಲಕಿಯರ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯೋಗಾನಂದ ಉದ್ಘಾಟಿಸಿದರು. ಎಸ್‌ಇಟಿ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ವೆಂಕಟರಾಮೇಗೌಡ, ಸರ್ಕಾರಿ ಬಾಲಕರ ಶಾಲೆಯ ಮುಖ್ಯ ಶಿಕ್ಷಕ ಸಂತಾನರಾಮನ್, ಸಿ.ಆರ್.ಪಿ ಬೆಟ್ಟಸ್ವಾಮಿಗೌಡ, ಮಂಡ್ಯ ಜಿಲ್ಲಾ ಪಧವೀದರ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ್, ಬಾಲಕಿಯರ ಶಾಲೆ ಮುಖ್ಯಶಿಕ್ಷಕ ಮಂಜುನಾಥ್ ಇದ್ದರು.