ಜಿಲ್ಲೆ

ಕ್ವಾರಂಟೈನ್ ಪಾಲಿಸದ ವ್ಯಕ್ತಿ ಮೇಲೆ ಮೊಕದ್ದಮೆ

kumarvrl

ಬೆಂಗಳೂರು: ಮಹಾಮಾರಿ ಕರೊನಾ ವೈರಸ್ ಸೋಂಕು ತಗುಲುತ್ತಿರುವ ಹಿನ್ನೆಲೆಯಲ್ಲಿ ವಿದೇಶದಿಂದ ರಾಜ್ಯಕ್ಕೆ ಆಗಮಿಸಿದ್ದ ವ್ಯಕ್ತಿಗೆ ಗೃಹಬಂಧನದಲ್ಲಿ (ಕ್ವಾರಂಟೈನ್) ಇರುವಂತೆ ಸೂಚಿಸಿದ್ದರೂ ಮನೆಯಿಂದ ಹೊರಬಂದು ಜನಸಂದಣಿಯಲ್ಲಿ ಓಡಾಡಿರುವ 3ನೇ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಥಣಿಸಂದ್ರದ 3ನೇ ಮುಖ್ಯರಸ್ತೆಯ ಆರ್ಯನ್ ಮೂನ್ ಸ್ಟಾರ್ಸ್ ಎನ್​ಕ್ಲೇವ್ ಅಪಾರ್ಟ್​ವೆುಂಟ್ ನಿವಾಸಿ ಸಂದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಈತನನ್ನು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಯ ಹೋಮ್ ಕ್ವಾರಂಟೈನ್ಸ್ ಜಾರಿ ದಳದ ಸಿಬ್ಬಂದಿ ವಶಕ್ಕೆ ಪಡೆದು ಆಕಾಶ್ ಆಸ್ಪತ್ರೆಯಲ್ಲಿ ಕ್ವಾರಂಟೈನ್​ಗೆ ಒಳಪಡಿಸಿದ್ದಾರೆ. ಬೇಜವಾಬ್ದಾರಿ ವರ್ತನೆ ಆರೋಪದ ಅಡಿ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಂದೀಪ್​ಕುಮಾರ್ ಮಾ.17ರಂದು ಇಂಡೋನೇಷ್ಯಾದಿಂದ ರಾಜ್ಯಕ್ಕೆ ಆಗಮಿಸಿದ್ದ. ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕು ತಪಾಸಣೆ ನಡೆಸಿದಾಗ ನೆಗೆಟೀವ್ ಎಂದು ವರದಿ ಬಂದಿತ್ತು. ಕೈಗೆ ಮೊಹರು ಹಾಕಿ ಗೃಹಬಂಧನದಲ್ಲಿರುವಂತೆ ಸೂಚಿಸಿ ಕಳುಹಿಸಿದ್ದರು. ಆದರೂ, ಸೋಮವಾರ (ಮಾ.23) ಮಧ್ಯಾಹ್ನ 1.30ರಲ್ಲಿ ಆತ ಜಾಲಹಳ್ಳಿಯ ಎಚ್​ಎಂಟಿ ಮುಖ್ಯರಸ್ತೆಯಲ್ಲಿ ಓಡಾಡುತ್ತಿದ್ದ. ಆತನ ಕೈಗೆ ಮೊಹರು ಇರುವುದನ್ನು ಗಮನಿಸಿ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ, ಪೊಲೀಸರು ಸ್ಥಳಕ್ಕೆ ಧಾವಿಸಿ

ಆತನ ಕೈಗೆ ಮೊಹರು ಇರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಬಳಿಕ ಹೋಮ್ ಕ್ವಾರಂಟೈನ್ಸ್ ಎನ್​ಫೋರ್ಸ್​ವೆುಂಟ್ದಳಕ್ಕೆ ಮಾಹಿತಿ ರವಾನಿಸಿದ್ದರು. ಮಾಹಿತಿ ಆಧರಿಸಿ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ಕರೊನಾ ಎನ್​ಫೋರ್ಸ್ ಮೆಂಟ್ ಸಿಬ್ಬಂದಿ, ಆತನನ್ನು ಆಂಬುಲೆನ್ಸ್ ಮೂಲಕ ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಕರೆದೊಯ್ದು ಕ್ವಾರಂಟೈನ್​ಗೆ ಒಳಪಡಿಸಿದ್ದಾರೆ.

ರಾಜ್ಯ ಸರ್ಕಾರ ಕರೊನಾ ವೈರಸ್ ನಿಯಂತ್ರಣ ಉದ್ದೇಶದಿಂದ ಶಂಕಿತರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದನ್ನು ನಿರ್ಬಂಧಿಸಿದೆ. ವಿದೇಶದಿಂದ ಆಗಮಿಸಿದವರ ಕೈಗೆ ಮೊಹರು ಹಾಕಿ 14 ದಿನಗಳವರೆಗೆ ಗೃಹ ಬಂಧನದಲ್ಲಿರುವಂತೆ ಆದೇಶಿಸಿದೆ. ಆದಾಗ್ಯೂ ನಗರದ ವೀಕ್ಷಣೆಗೆ ಹೊರ ಬಂದಿರುವುದಾಗಿ ಹೇಳಿಕೆ ನೀಡಿದ್ದಾನೆ. ಗಂಭೀರ ಪರಿಸ್ಥಿತಿಯಲ್ಲಿಯೂ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಿರ್ಲಕ್ಷ್ಯ ತೋರಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.