ಜಿಲ್ಲೆ

ಮಂದಹಾಸ ಮೂಡಿಸಿದ ಪುನರ್ವಸು

ರವಿ ಎಸ್. ಬಳೂಟಗಿ

ಗಜೇಂದ್ರಗಡ: ತಾಲೂಕಿನಾದ್ಯಂತ ಎರಡು ದಿನಗಳಿಂದ ಪುನರ್ವಸು ಮಳೆ ಉತ್ತಮವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಗಜೇಂದ್ರಗಡ ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಮಳೆ ನೀರಿನಿಂದ ಜನರು ಪರದಾಡುತ್ತಿದ್ದಾರೆ.

ತಾಲೂಕು ಕೇಂದ್ರ ಸೇರಿದಂತೆ ವದೇಗೊಳ, ಗೌಡಗೇರಿ, ರಾಜೂರು, ಕುಂಟೋಜಿ, ಪುರ್ತಗೇರಿ, ಲಕ್ಕಲಕಟ್ಟಿ, ನಾಗೇಂದ್ರಗಡ ವಿವಿಧ ಗ್ರಾಮಗಳಲ್ಲಿ ಬುಧವಾರ ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ ಪ್ರಾರಂಭವಾಗಿ, ಮಧ್ಯಾಹ್ನ, ರಾತ್ರಿ ರಭಸವಾಗಿ ಸುರಿಯಿತು. ಕಳೆದ ಹಲವು ದಿನಗಳಿಂದ ಕಣ್ಮರೆಯಾಗಿದ್ದರಿಂದ ಹೆಸರು, ಗೋವಿನಜೋಳ, ಹತ್ತಿ, ಬೆಳೆಗಳು ಒಣಗಿ ಹಾಳಾಗುವ ಹಂತಕ್ಕೆ ತಲುಪಿದ್ದವು. ಹೀಗಾಗಿ ಬುಧವಾರ, ಗುರುವಾರ ಸುರಿದ ಮಳೆಯಿಂದ ಬೆಳೆಗಳಿಗೆ ಮರು ಜೀವ ಬಂದ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮದಹಾಸ ಮೂಡಿದೆ.

ಪಟ್ಟಣದ 20ನೇ ವಾರ್ಡಿನ ಕೆನರಾ ಬ್ಯಾಂಕ್ ಹತ್ತಿರದ ರಸ್ತೆಯಲ್ಲಿ ಮಳೆ ನೀರು ಶೇಖರಗೊಂಡು ಹೊಂಡಗಳಾಗಿ ನಿರ್ಮಾಣವಾಗಿವೆ. ಇದರ ಸುತ್ತಲಿನ ಮನೆಗಳಿಗೆ ಮಳೆ ನೀರು ನುಗ್ಗಿವೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ಪುರಸಭೆ ಅಧಿಕಾರಿಗಳಿಗೆ, ವಾರ್ಡಿನ ಜನಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ತಿಳಿಸುತ್ತಾ ಬಂದರೂ ಪ್ರಯೋಜನವಾಗಿಲ್ಲ. ಇಲ್ಲಿ ಖಾಸಗಿ ಮಹಿಳಾ ವಸತಿ ನಿಲಯ, ಆಸ್ಪತ್ರೆ ಇದೆ ಹಾಗೂ ಇಲ್ಲಿರುವ ನಿವಾಸಿಗಳು ಈ ನೀರಿನಿಂದ ಹುಟ್ಟುವ ಸೊಳ್ಳೆ ಕಾಟಕ್ಕೆ ಬೇಸತ್ತು ಹೋಗಿ ಆಸ್ಪತ್ರೆ ಸೇರುತ್ತಿದ್ದೇವೆ ಎಂಬುದು ನಿವಾಸಿಗಳ ಆರೋಪ.