ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಗೃಹ. 
ಜಿಲ್ಲೆ

ಮತ್ತೆ ಗಲೀಜಾಗುತ್ತಿರುವ ಕೆರೆ ಆವರಣ

ಮಹಾಲಿಂಗಪುರ: ಪಟ್ಟಣದ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಗೃಹದ ಗುತ್ತಿಗೆದಾರರು ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದರಿಂದ ಬೇಸತ್ತ ಸಾರ್ವಜನಿಕರು ಪಕ್ಕದ ಸಿದ್ಧ ಸರೋವರ ಕೆರೆಯ ಬಳಿ ಬಯಲು ಶೌಚಕ್ಕೆ ಮೊರೆ ಹೋಗಿದ್ದು, ಇದರಿಂದ ವಾಯು ವಿಹಾರಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜರಂಗದಳದ ಮಹಾಲಿಂಗಪುರ ಹೋಬಳಿ ಸಂಚಾಲಕ ಸಚಿನ್ ಕಲ್ಮಡಿ ಮಾತನಾಡಿ, ಕಳೆದ ತಿಂಗಳು ಅಂದಾಜು 12 ದಿನಗಳವರೆಗೆ ಸಂಘಟನೆ ಯುವಕರು ಸೇರಿ ಸಿದ್ಧ ಸರೋವರ ಕೆರೆಯ ಆವರಣ ಸ್ವಚ್ಛಗೊಳಿಸಿ ಸಾರ್ವಜನಿಕರ ವಾಯು ವಿಹಾರಕ್ಕೆ ಅನುಕೂಲ ಕಲ್ಪಿಸಿದ್ದೇವೆ. ಆದರೆ, ಬಸ್ ನಿಲ್ದಾಣದಲ್ಲಿನ ಶೌಚಗೃಹ ಗುತ್ತಿಗೆ ಪಡೆದವರು ಸಾರ್ವಜನಿಕರಿಂದ ತಲಾ 10 ರೂ. ವಸೂಲಿ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರು, ಪ್ರಯಾಣಿಕರು ನೀರಿನ ಬಾಟಲಿ ಹಿಡಿದು ಕೆರೆಯ ಒಡ್ಡಿನ ಪ್ರದೇಶದಲ್ಲಿ ಶೌಚ ಮಾಡುತ್ತಿದ್ದಾರೆ. ಇದರಿಂದಾಗಿ ಸಂಬಂಧಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ಕನಿಷ್ಠ ದರದಲ್ಲಿ ಶೌಚಗೃಹ ಬಳಕೆಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಬಜರಂಗದಳದ ನಗರ ಘಟಕದ ಸಂಚಾಲಕ ರಾಘು ಪವಾರ ಮಾತನಾಡಿ, ಬಸ್ ನಿಲ್ದಾಣದ ಸಾರ್ವಜನಿಕ ಶೌಚಗೃಹ ನಿರ್ವಹಣೆ ಮಾಡುವವರಿಗೆ ಕನ್ನಡ ಭಾಷೆ ಬರಲ್ಲ. ಗುತ್ತಿಗೆದಾರರ ಹೆಸರು ಮೊಬೈಲ್ ಸಂಖ್ಯೆ ಕೇಳಿದರೂ ಕೊಡುತ್ತಿಲ್ಲ. ಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದ ಜಿಲ್ಲಾಮಟ್ಟದ ಅಧಿಕಾರಿಗಳು ಮಹಾಲಿಂಗಪುರ ಬಸ್ ನಿಲ್ದಾಣದತ್ತ ಗಮನಹರಿಸಿ ಇಲ್ಲಿನ ಅವ್ಯವಸ್ಥೆ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಕಡಿಮೆ ದರದಲ್ಲಿ ಶೌಚಗೃಹ ಬಳಕೆಗೆ ನೀಡಿ: ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಗೃಹ ಟೆಂಡರ್‌ದಲ್ಲಿ ನಮೂದಿಸಿದಂತೆ ಸಾರ್ವಜನಿಕರಿಂದ ದರ ಪಡೆದುಕೊಂಡರೆ ಸಿದ್ಧ ಸರೋವರ ಕೆರೆಯ ಆವರಣ ಸಂಪೂರ್ಣ ಬಯಲು ಶೌಚಮುಕ್ತವನ್ನಾಗಿಸಲು ಸಾಧ್ಯ. ಪುರಸಭೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗುತ್ತಿಗೆದಾರರಿಗೆ ನೊಟೀಸ್ ನೀಡಿ, ಸಾರ್ವಜನಿಕರಿಂದ ಪಡೆಯುತ್ತಿರುವ ದುಬಾರಿ ಶುಲ್ಕ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ಬಜರಂಗ ದಳದ ಕಾರ್ಯಕರ್ತರಾದ ನಂದು ಲಾತೂರ, ಭೈರೇಶ ಆದೆಪ್ಪನವರ, ಅಭಿ ಲಮಾಣ, ತಮ್ಮಣ ್ಣ ಆದೆಪ್ಪನವರ, ಆನಂದ ಬಂಡಿಗಣ, ಸಂತೋಷ ಹಜಾರೆ, ಈರಪ್ಪ ಹುಣಶ್ಯಾಳ, ಹಣಮಂತ ನಾವಿ, ಆನಂದ ಮಡ್ಡೆನ್ನವರ, ಕೃಷ್ಣಾ ಕಳ್ಳಿಮನಿ, ಯಲ್ಲಪ್ಪ ಬನ್ನೆನ್ನವರ, ಬಸು ಮುರಾರಿ, ಅರ್ಜುನ ಪವಾರ, ಶ್ರೀನಿಧಿ ಕುಲಕರ್ಣಿ, ಧರ್ಮು ಪೂಜಾರಿ, ಸಿ.ಬಿ. ಭಜಂತ್ರಿ, ಚನ್ನು ಆರೆಗಾರ, ಸುರೇಶ ಕೊಣ್ಣೂರ, ದತ್ತ ಯರಗಟ್ಟಿಕರ, ಸಂಗಮೇಶ ಅಂಬಲ್ಯಾಳ ಮತ್ತಿತರರು ಆಗ್ರಹಿಸಿದ್ದಾರೆ.