ಬೆಂಗಳೂರು: ಕೆಆರ್ಎಸ್ ಬಾಗಿಲಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರನ್ನೇ ಅಡ್ಡಡ್ಡ ಮಲಗಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕೆಆರ್ಎಸ್ ಬಿರುಕು ವಿಚಾರವಾಗಿ ಸುಮಲತಾ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಮಂಡ್ಯಕ್ಕೆ ಇಂಥ ಸಂಸದರು ಹಿಂದೆ ಸಿಕ್ಕಿಲ್ಲ, ಮುಂದೆ ಸಿಗುವುದೂ ಇಲ್ಲ. ಮೊನ್ನೆ ನಡೆದ ಸಭೆಯಲ್ಲಿ ಇವರು ಮಾತನಾಡಿದ್ದನ್ನು ನೋಡಿದ್ದೇನೆ. ಕೆಆರ್ಎಸ್ ಅನ್ನು ಇವರೇ ರಕ್ಷಣೆ ಮಾಡುತ್ತಾರಂತೆ. ಕೆಆರ್ಎಸ್ ರಕ್ಷಣೆಗಾಗಿ ಇವರನ್ನೇ ಜಲಾಶಯದ ಗೇಟ್ ಬಳಿ ಮಲಗಿಸಿದರೆ ಎಲ್ಲವೂ ಸರಿಯಾಗಲಿದೆ ಎಂದು ವಿರುದ್ಧ ಕಿಡಿಕಾರಿದರು.
ಯಾವುದೋ ಅನುಕಂಪದಲ್ಲಿ ಗೆದ್ದು ಬಂದಿದ್ದಾರೆ. ಅದಕ್ಕಾಗಿ ಇವರು ಜನತೆಯ ಋಣ ತೀರಿಸುವ ಕೆಲಸ ಮಾಡಬೇಕು. ದೊರಕಿದ ಅನುಕಂಪವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜನರೇ ಮುಂದೆ ಪಾಠ ಕಲಿಸಲಿದ್ದಾರೆ. ಪದೇಪದೆ ಇಂತಹ ಅವಕಾಶ ಸಿಗಲ್ಲ ಎಂದ ಕುಮಾರಸ್ವಾಮಿ, ಕೆಲಸ ಎಲ್ಲಿ ಮಾಡಬೇಕು ಎನ್ನುವ ಮಾಹಿತಿ ಇರದೆ, ಯಾರದ್ದೋ ವೈಯಕ್ತಿಕ ದ್ವೇಷದ ಮೇಲೆ ಹೇಳಿಕೆ ಕೊಡುವುದು ಬಹಳ ದಿನ ನಡೆಯಲ್ಲ ಎಂದರು.