ಜಿಲ್ಲೆ

ಸರಳತೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ ಅರಸು

ನರಗುಂದ: ದೇವರಾಜ ಅರಸು ಎನ್ನುವುದು ಕೇವಲ ನಾಯಕನೊಬ್ಬನ ಹೆಸರಲ್ಲ. ಅದು ಕರ್ನಾಟಕದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸ ಯುಗದ ಹೆಸರು. ಅವರ ಗಂಭೀರತೆ, ಸರಳತೆ, ನಿಸ್ವಾರ್ಥಪರತೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದು ತಹಸೀಲ್ದಾರ್ ಶ್ರೀಶೈಲ್ ತಳವಾರ ಹೇಳಿದರು.


ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.


ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ರವೀಂದ್ರ ಬಾಣಿ ಮಾತನಾಡಿ, ದೇವರಾಜ ಅರಸು ಒಬ್ಬ ಪ್ರಭಾವಿ ನಾಯಕರಾಗಿದ್ದರು. 8 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದರು. ಉಳುವವನೆ ನೆಲದೊಡೆಯ, ಸಾಲದ ಹೊರೆ ಇಳಿತ, ಭಾಗ್ಯಜ್ಯೋತಿ, ಬಡವರು, ಸಮಾಜದಲ್ಲಿ ಬಿದ್ದವರು, ದೀನದಲಿತರು, ಕೆಳವರ್ಗದವರು, ಸರ್ವರಿಗೂ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರಿಂದ 2500ಕ್ಕೂ ಅಧಿಕ ವಸತಿ ನಿಲಯಗಳನ್ನು ಸ್ಥಾಪಿಸಿ, ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ಅದಮ್ಯ ಚೇತನರಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.


2022ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿರುವ ಚೈತ್ರಾ ದೇಸಾಯಿಗೌಡ್ರ, ಅರುಣ ಕಳಸದ, ವಿದ್ಯಾಶ್ರೀ ಪಾಟೀಲ, ಸೌಮ್ಯಾ ಗುಡಿಹಿಂದಿನ, ದೀಪಾ ಜಕ್ಕಲಿ, ಸಲ್ಮಾಬೇಗಂ ನದಾಫ್, ವಸತಿನಿಲಯದ ಅಡುಗೆ ಸಿಬ್ಬಂದಿ ಮಹಾದೇವಪ್ಪ ಗೊಬ್ಬರಗುಂಪಿ, ಭೀಮವ್ವ ಬೇವಿನಗಿಡದ ಅವರನ್ನು ಸನ್ಮಾನಿಸಲಾಯಿತು. ಮೆಟ್ರಿಕ್ ನಂತರ ವಸತಿ ನಿಲಯದ ಮೇಲ್ವಿಚಾರಕ ಎಸ್.ಬಿ.ಪಾಟೀಲ, ದ್ಯಾಮಣ್ಣ ಸವದತ್ತಿ, ನೀಲಪ್ಪ ಗುಡದನ್ನವರ, ಶಿವಾಜಿ ಭೋಸ್ಲೆ, ಶಿವಾನಂದ ಎಸ್, ಕೃಷ್ಣಾ ಗೊಂಬಿ, ಮಲ್ಲಪ್ಪ ಅಬ್ಬಿಗೇರಿ ಉಪಸ್ಥಿತರಿದ್ದರು. ಸವಿತಾ, ಸುನೀತಾ, ಎಸ್.ಬಿ. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.