ಬೆಂಗಳೂರು: ರಾಜ್ಯಾದ್ಯಂತ ನಾಡಪ್ರಭು ಕೆಂಪೇಗೌಡರ 513ನೇ ಜಯಂತ್ಯುತ್ಸವ ಆಚರಿಸುತ್ತಿದ್ದು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸೋಮವಾರ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಡಿನ ಮೂವರು ಗಣ್ಯರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಆದಿಚುಂಚನಗಿರಿ ಕ್ಷೇತ್ರದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ‘ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಿದರು.
ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಈ ವರ್ಷದಿಂದ ರಾಜ್ಯ ಸರ್ಕಾರ ‘ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ’ ಕೊಡ ಮಾಡುತ್ತಿದೆ. ಚೊಚ್ಚಲ ಪ್ರಶಸ್ತಿಯನ್ನು ಈ ಬಾರಿ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ಪ್ರದಾನ ಮಾಡಲಾಯಿತು. ನಾರಾಯಣಮೂರ್ತಿ ಅವರ ಪರವಾಗಿ ಪತ್ನಿ ಡಾ.ಸುಧಾಮೂರ್ತಿ ಅವರು ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು ತಲಾ 5 ಲಕ್ಷ ರೂಪಾಯಿ ನಗದು, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಮೂವರು ಗಣ್ಯರೂ ಬೆಂಗಳೂರಿನ ಬೆಳವಣಿಗೆಗೆ ಮತ್ತು ಕೀರ್ತಿಗೆ ತಮ್ಮದೇ ಆದ ಅನನ್ಯ ವಿಧಾನಗಳ ಮೂಲಕ ಅನುಪಮ ಕೊಡುಗೆ ನೀಡಿದ್ದಾರೆ. ಸಾಧಕರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರದ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಇದರಲ್ಲಿ ಉದ್ಯಮಿ ಮೋಹನದಾಸ್ ಪೈ, ವಿವೇಕಾನಂದ ಯೂತ್ ಮೂವ್ಮೆಂಟ್ ಸ್ಥಾಪಕ ಆರ್.ಬಾಲಸುಬ್ರಹ್ಮಣ್ಯಂ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಅವರು ಸದಸ್ಯರಾಗಿದ್ದರು. ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್. ವಿನಯದೀಪ್ ಅವರು ಸದಸ್ಯ ಕಾರ್ಯದರ್ಶಿ ಆಗಿದ್ದರು.
ಡಾ.ಸುಧಾಮೂರ್ತಿ ಮಾತನಾಡಿ, ಕೆಂಪೇಗೌಡರು ಈ ನಾಡನ್ನು ಕಟ್ಟದಿದ್ದರೆ ಐಟಿ-ಬಿಟಿ ಬರುತ್ತಿರಲಿಲ್ಲ. ಜತೆಗೆ ಟ್ರಾಫಿಕ್ ಕೂಡ ಇರುತ್ತಿರಲಿಲ್ಲ. ನಮ್ಮ ಮಕ್ಕಳಿಗೆ ಉದ್ಯೋಗ ಇಲ್ಲೇ ಸಿಕ್ತಿದೆ. ಬೆಂಗಳೂರಿನ ಜತೆಗೆ ಹುಬ್ಬಳ್ಳಿ-ಧಾರವಾಡದಲ್ಲೂ ಉದ್ಯೋಗ ಸಿಗುವಂತೆ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು.
ಎಸ್.ಎಂ. ಕೃಷ್ಣ ಮಾತನಾಡಿ, ಕೆಂಪೇಗೌಡ ಯಾರ ಸ್ವತ್ತೂ ಅಲ್ಲ, ಇಡೀ ಜನಾಂಗದ ಸ್ವತ್ತು. ಕುವೆಂಪು ಅವರು ರಚಿಸಿರುವ ಶಾಂತಿಯ ತೋಟದಂತೆ. ಇಲ್ಲಿ ಸಹಸ್ರಾರು ಜನ ನೆಲೆಸಿದ್ದಾರೆ. ಯಾವ ಘರ್ಷಣೆಯೂ ಇಲ್ಲ, ಎಲ್ಲ ಸಮಾನವಾಗಿ ಹೋಗಬೇಕು. ಮನಮೋಹನ್ ಸಿಂಗ್ ಅವರು 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಹೆಸರು ಇಟ್ರು. ಅವರಿಗೆ ಧನ್ಯವಾದ. ಬೆಂಗಳೂರಿನಂತೆ ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಕೂಡ ಬೆಳೆಯಬೇಕಿದೆ. ಬೊಮ್ಮಾಯಿ ಸರ್ಕಾರದಲ್ಲಿ ಅದನ್ನು ಕಾಣುತ್ತೇನೆ. ಬೆಂಗಳೂರಿನ ಪ್ರತಿಷ್ಠೆಯನ್ನು ವಿಶ್ವದಲ್ಲಿ ಮತ್ತಷ್ಟು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ಇನ್ನು ಪ್ರಶಸ್ತಿ ಜತೆಗೆ 5 ಲಕ್ಷದ ಚೆಕ್ ಕೊಟ್ಟಿದ್ದಾರೆ. ಈ ಹಣವನ್ನು ನನ್ನ ವಿಧ್ಯಾಭ್ಯಾಸಕ್ಕೆ ಭದ್ರಬುನಾದಿ ಹಾಕಿದ ಮೈಸೂರಿನ ರಾಮಕೃಷ್ಣ ಆಶ್ರಮಕ್ಕೆ ಕೊಡುತ್ತೇನೆ ಎಂದು ವೇದಿಕೆಯಲ್ಲೇ ಎಸ್.ಎಂ.ಕೃಷ್ಣ ಘೋಷಿಸಿದರು.
ಕೆಂಪೇಗೌಡ ಪ್ರಶಸ್ತಿ ಪಡೆದಿರುವ ನನಗೆ ಬಹಳ ಸಂತೋಷವಾಗಿದೆ. ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಸ್.ಎಂ.ಕೃಷ್ಣ, ಇನ್ಫೋಸಿಸ್ನ ನಾರಾಯಣ ಮೂರ್ತಿ ಅವರಿಗೂ ಪ್ರಶಸ್ತಿ ಸಿಕ್ಕಿದೆ. ಅವರ ಜತೆ ಪ್ರಶಸ್ತಿ ಪಡೆದದ್ದು ನನ್ನ ಪಾಲಿಗೆ ಅವಿಸ್ಮರಣೀಯ. ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವೆ ಎಂದು ವಿಡಿಯೋ ಮೂಲಕ ಪ್ರಕಾಶ್ ಪಡುಕೋಣೆ ತಿಳಿಸಿದ್ದಾರೆ.
ಶ್ರೀ ನಂಜಾವದೂತ ಸ್ವಾಮೀಜಿ, ಸಚಿವರಾದ ಆರ್. ಅಶೋಕ್, ಅಶ್ವಥ ನಾರಾಯಣ್, ಮುನಿರತ್ನ, ಗೋಪಾಲಯ್ಯ, ಸುನೀಲ್ ಕುಮಾರ್, ರಾಜ್ಯಸಭೆ ಸದಸ್ಯ ಜಗ್ಗೇಶ್, ಸಂಸದ ತೇಜಸ್ವಿಸೂರ್ಯ, ಶಾಸಕ ರಿಜ್ವಾನ್ ಅರ್ಷದ್, ಪರಿಷತ್ ಸದಸ್ಯ ಗೋವಿಂದರಾಜ್ ಸೇರಿದಂತೆ ಹಲವು ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಕುರಿತು ಹೊರತಂದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.