???????????????????????????????????? 
ಜಿಲ್ಲೆ

ಮಾಂತ್ರಿಕ ಸ್ಪರ್ಶ ಪಡೆದ ಕನ್ನಡ ಮೇಘದೂತ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಳಿದಾಸನ ಮೇಘದೂತವೆಂದರೆ ಮಂದಾಕ್ರಾಂತ ವೃತ್ತದಲ್ಲಿರುವ ಸುಂದರ ಚಿತ್ರಮಾಲೆಯಾಗಿದ್ದು, ಒಂದೊಂದು ಪದ್ಯ ಒಂದೊಂದು ರತ್ನದಂತಿವೆ. ಭಾಷೆ ಬಳಕೆ ಬಗ್ಗೆ ಪೂರ್ಣ ಅರಿವಿದ್ದ ವರಕವಿ ದ.ರಾ. ಬೇಂದ್ರೆ ಅವರು ಮೂಲ ಸಂಸ್ಕೃತಿದಲ್ಲಿನ ಕಾಳಿದಾಸನ ಮೇಘದೂತವನ್ನು ಕನ್ನಡದಲ್ಲಿ ತಮ್ಮ ಭಾವಗ್ರಹಣದ ಕನ್ನಡ ಮೇಘದೂತ ಎಂಬ ಶೀರ್ಷಿಕೆ ಅಡಿ ಕನ್ನಡಿಸಿದ್ದಾರೆ ಎಂದು ಹಿರಿಯ ಚಿಂತಕ ಡಾ. ಶ್ರೀರಾಮ ಭಟ್ಟ ಅಭಿಪ್ರಾಯಪಟ್ಟರು.
ಮಹಾಕವಿ ಕಾಳಿದಾಸ ದಿನ ನಿಮಿತ್ತ ನಗರದ ಅನ್ವೇಷಣ ಕೂಟ ವತಿಯಿಂದ ಸಾಧನಕೇರಿ ಚೈತ್ರದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವರಕವಿ ಬೇಂದ್ರೆಯವರ ಕನ್ನಡ ಮೇಘದೂತ ಕೃತಿ ಕುರಿತು ಮಾತನಾಡಿದರು.
ತಮ್ಮದೇ ಆದ ಭಾಷೆಯ ಬಳಕೆ, ಆ ಭಾಷೆಯ ವಿಶಿಷ್ಟ ಸೊಗಡಿನಿಂದ ಅವರ ಈ ಕೃತಿ ಮಾಂತ್ರಿಕ ಸ್ಪರ್ಶ ಪಡೆದ ವಿಶಿಷ್ಟ ರಚನೆಯಾಗಿ ಮೂಡಿಬಂದಿದೆ. ಕೆಲವೆಡೆ ಕಾಳಿದಾಸ ಸುತ್ತು ಬಳಸಿ ಹೇಳಿದ್ದಾನೆ. ಆದರೆ ಬೇಂದ್ರ ಒಲವು ಮೂಲವಾದ ವಿರಹ ಕಾವ್ಯವೊಂದನ್ನು ಭಾಷೆಯ ಚಿಕ್ಕ ಚೊಕ್ಕ ಬಳಕೆಯಿಂದ ಕನ್ನಡಲೋಕಕ್ಕೆ ಚೆಂದದ ಕುಸುರಿ ಚಿತ್ರಣವೊಂದನ್ನು ಈ ಮೂಲಕ ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿ ಆನಂದ ಝುಂಜರವಾಡ ಮಾತನಾಡಿ, ತಮ್ಮದೇ ಆದ ಅನುವಾದ ತತ್ವವನ್ನಿಟ್ಟುಕೊಂಡಿದ್ದ ಬೇಂದ್ರೆಯವರ ಈ ಭಾವಗ್ರಹಣದ ಕೃತಿ ಕಾಮವನ್ನು ಸೋಲಿಸಿ ಒಲವನ್ನು ಗೆಲ್ಲಿಸುವ ಅಪರೂಪದ ಕಾವ್ಯವಾಗಿದೆ ಎಂದರು.
ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಡಾ. ಹ.ವೆಂ. ಕಾಖಂಡಿಕಿ, ಪ್ರೊ.ದುಷ್ಯಂತ ನಾಡಗೌಡ, ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಪ್ರೊ.ಸಿ.ಆರ್. ಜೋಶಿ, ಶಾಮಸುಂದರ ಬಿದರಕುಂದಿ, ರಾಮಚಂದ್ರ ಧೋಂಗಡೆ, ಗಿರೀಶ ವಾಜಪೇಯಿ, ಎಸ್.ಕೆ. ಪಾಟೀಲ, ವಿ.ಎಸ್. ಕುಲಕರ್ಣಿ, ಅರವಿಂದ ಕುಲಕರ್ಣಿ, ಅನಂತ ಥಿಟೆ, ಅನಂತ ದೇಶಪಾಂಡೆ, ಮಾಲತೇಶ ಹುಬ್ಬಳ್ಳಿ, ರಾಜೀವ ಪಾಟೀಲ ಕುಲಕರ್ಣಿ, ಆರ್.ಎಂ. ದೊಡ್ಡಮನಿ, ಎ.ಡಿ. ಸಿದ್ದೇಶ್ವರ, ಎಂ.ವಿ. ಕಲ್ಲೂರಮಠ, ಡಾ. ಮಂದಾಕಿನಿ ಪುರೋಹಿತ, ಶೈಲಾ ಛಬ್ಬಿ, ರಾಧಾ ಶಾಮರಾವ, ಡಾ. ಶಾಲಿನಿ ರಘುನಾಥ, ವಿಷಯಾ ಜೇವೂರ, ಇತರರು ಇದ್ದರು.