ಜಿಲ್ಲೆ

ಮೈಸೂರು ಸಿದ್ದಾರ್ಥನಗರ ಕಾಲೇಜಿನಲ್ಲಿ ಉದ್ಯೋಗ ಮೇಳ

ಮೈಸೂರು: ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಬಾರ್ಕ್ಲೇಸ್ ಸಂಸ್ಥೆ ವತಿಯಿಂದ ಕಾಲೇಜು ಆವರಣದಲ್ಲಿ ಶನಿವಾರ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಉದ್ಯೋಗ ಮೇಳ ಉದ್ಘಾಟಿಸಿದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಉದ್ಯೋಗವು ವ್ಯಕ್ತಿಯ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸ್ಥಿರತೆ ಮತ್ತು ಘನತೆಗೆ ಅಡಿಪಾಯವಾಗಿದೆ. ಉತ್ತಮ ಹುದ್ದೆಗಳನ್ನು ಪಡೆಯಲು ವಿದ್ಯಾರ್ಥಿಗಳು ಉತ್ತಮವಾಗಿ ಓದಬೇಕು ಎಂದು ಕರೆ ನೀಡಿದರು.

ಈಚಿನ ದಿನಗಳಲ್ಲಿ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಈ ರೀತಿಯ ಉದ್ಯೋಗ ಮೇಳದ ಲಾಭಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉದ್ಯೋಗವು ಕೇವಲ ಜೀವನೋಪಾಯವಷ್ಟೇ ಅಲ್ಲ, ಇದು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಶ್ರಮದ ಪ್ರತಿಫಲವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ನಿರುದ್ಯೋಗ ಸಮಸ್ಯೆ ಬಹುದೊಡ್ಡ ಸವಾಲಾಗಿದೆ. ಈ ರೀತಿಯ ಉದ್ಯೋಗ ಮೇಳಗಳು ನಿರುದ್ಯೋಗ ತಡೆಯುವ ದಿಕ್ಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದರ ಜತೆಗೆ ಸರ್ಕಾರಿ ಯೋಜನೆಗಳಲ್ಲಿ ಲಭ್ಯವಿರುವ ಆರ್ಥಿಕ ಸಹಾಯವನ್ನು ಪಡೆದು ಬದುಕನ್ನು ಸುಧಾರಿಸಿಕೊಳ್ಳಬೇಕು ಎಂದರು.

ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ಸಾಧನಾ ಎ. ಪೋಟೆ ಮಾತನಾಡಿ, ವ್ಯಕ್ತಿಯು ತನ್ನ ವೃತ್ತಿ ಜೀವನವನ್ನು ರೂಪಿಸಿ ಕೊಳ್ಳಲು ಈ ರೀತಿಯ ವೇದಿಕೆಗಳು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತವೆ. ತರಬೇತಿ, ಕೌಶಲಾಭಿವೃದ್ಧಿ ಮತ್ತು ಶಿಕ್ಷಣವು ಉತ್ತಮ ಉದ್ಯೋಗ ಸಾಧ್ಯತೆಯ ಹಾದಿಯಾಗಿದೆ ಎಂದು ವಿವರಿಸಿದರು.

ಸಮರ್ಥನಂ ಸಂಸ್ಥೆಯ ಉದ್ಯೋಗ ವಿಭಾಗದ ಅಧಿಕಾರಿ ಕೆ. ಸತೀಶ್ ಮಾತನಾಡಿ, ಈ ಉದ್ಯೋಗಮೇಳ ಪ್ರತಿಭಾಶಾಲಿ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಅರ್ಥಪೂರ್ಣ ಸಂಪರ್ಕ ಮತ್ತು ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಮಾಯಾದೇವಿ, ಉದ್ಯೋಗ ಮತ್ತು ಮಾರ್ಗದರ್ಶನ ಕೋಶದ ಸಂಚಾಲಕ ಡಾ. ಪಿ.ಸಿದ್ಧರಾಮು ಪಿ, ಐಕ್ಯೂಎಸಿ ಸಂಚಾಲಕಿ ಪ್ರೊ.ಜೆ.ಪಿ. ಸವಿತಾ, ಸಮರ್ಥನಂ ಸಂಸ್ಥೆಯ ಪ್ರತಿನಿಧಿಗಳಾದ ಶಿವರಾಜು, ಸುಭಾಷ್ ಹಾಗೂ ಇತರರು ಇದ್ದರು. ಉದ್ಯೋಗ ಮೇಳದಲ್ಲಿ 500 ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು, 24 ಕಂಪನಿಗಳು ಭಾಗವಹಿಸಿದ್ದವು. 120ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರಥಮ ಸಂದರ್ಶನ ಮುಗಿಸಿ ದ್ವಿತೀಯ ಸಂದರ್ಶನಕ್ಕೆ ಆಯ್ಕೆಗೊಂಡರು.