ಬೆಂಗಳೂರು: ನಾನು ಮಾಜಿ ಮುಖ್ಯಮಂತ್ರಿ, ಮತ್ತೆ ಮಂತ್ರಿ ಆಗುವುದಿಲ್ಲ. ಉಳಿದ ಹಿರಿಯರ ವಿಚಾರ ನನಗೆ ಗೊತ್ತಿಲ್ಲ. ನಾನಂತೂ ಸ್ವಾಭಿಮಾನ ಹಾಗೂ ಗೌರವದ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ನಾನು ಸೇರಲ್ಲ ಎಂಬುದು ನನ್ನ ವೈಯಕ್ತಿಕ ನಿರ್ಧಾರ. ಇದು ಅಚಲವಾಗಿದ್ದು, ನನ್ನ ಈ ತೀರ್ಮಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇನ್ಮುಂದೆ ಶಾಸಕನಾಗಿ ಕೆಲಸ ಮಾಡುವೆ. ವರಿಷ್ಠರು ಅವಕಾಶ ನೀಡಿದರೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವೆ. ಯಡಿಯೂರಪ್ಪ ಹಾಗೂ ನಾನು ಒಟ್ಟಿಗೆ ಪಕ್ಷ ಕಟ್ಟುವ ಕೆಲಸದಲ್ಲಿ ಭಾಗಿಯಾಗಿದ್ದೆವು. ಹಾಗಾಗಿ ಅವರ ನೇತೃತ್ವದ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಆಗ ಯಾವುದೇ ಮುಜುಗರ ಉಂಟಾಗಲಿಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.
ಪಕ್ಷದ ರಾಜ್ಯಾಧ್ಯಕ್ಷ, ವಿಧಾನಸಭೆ ಸ್ಪೀಕರ್, ಮಂತ್ರಿ, ಮುಖ್ಯಮಂತ್ರಿ... ಹೀಗೆ ಹಲವಾರು ಸ್ಥಾನಮಾನವನ್ನು ಪಕ್ಷ ನನಗೆ ನೀಡಿದೆ. ಯಾವುದೇ ಬೇಸರ ಅಥವಾ ಇನ್ನಾವುದೇ ಉದ್ದೇಶದಿಂದ ಬೊಮ್ಮಾಯಿ ಸಚಿವ ಸಂಪುಟಕ್ಕೆ ಸೇರದಿರುವ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಜಗದೀಶ ಶೆಟ್ಟರ್ ಸಮಜಾಯಿಷಿ ನೀಡಿದರು.