ಜಿಲ್ಲೆ

ಎಚ್​.ಡಿ.ಕುಮಾರಸ್ವಾಮಿ ಆಪ್ತನ ಮನೆ ಮೇಲೂ ಐಟಿ ದಾಳಿ

arunakunigal

ಬೆಂಗಳೂರು: ಬಿಎಸ್​ವೈ ಆಪ್ತ ಉಮೇಶ್​ ಮನೆ ಮೇಲೆ ಐಟಿ ದಾಳಿ ನಡೆದ ಸುದ್ದಿ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ಆಪ್ತ ಸೋಮಶೇಖರ್​ ನಿವಾಸದ ಮೇಲೂ ಐಟಿ ದಾಳಿ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸೋಮಶೇಖರ್​ ಕ್ಲಾಸ್​-1 ಕಾಂಟ್ರ್ಯಾಕ್ಟರ್​ ಆಗಿದ್ದು, ಬಸವೇಶ್ವರನಗರದಲ್ಲಿರುವ ಇವರ ಮನೆ ಮೇಲೆ ಗುರುವಾರವೇ ಐಟಿ ದಾಳಿ ಆಗಿದೆ. ಟೆಂಟರ್​ಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮತ್ತು ಸ್ವಲ್ಪ ಪ್ರಮಾಣದಲ್ಲಿ ಹಣ- ಚಿನ್ನ ಮನೆಯಲ್ಲಿ ಸಿಕ್ಕಿದ್ದು, ಶೀಘ್ರವೇ ಐಟಿ ಅಧಿಕಾರಿಗಳು ಸೋಮಸೇಖರ್​ ಅವರನ್ನ ವಿಚಾರಣೆಗೆ ಕರೆಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಎಸ್​ವೈ ಆಪ್ತ ಉಮೇಶ್​ ಮನೆ ಮೇಲೆ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ್ದ ಎಚ್​ಡಿಕೆ, ಬಹಳ ದಿನಗಳ ನಂತರ ಉಪ ಚುನಾವಣೆ ಹೊತ್ತಿನಲ್ಲಿ ರಾಜ್ಯದಲ್ಲಿ ಐಟಿ ದಾಳಿ ನಡೆದಿದೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಆಪ್ತರ ಮನೆ ಮೇಲೆ ಯಾವುದೋ ಮಾಹಿತಿ ಮೇರೆಗೆ ದಾಳಿ ಮಾಡಿರಬಹುದು. ಬಿಜೆಪಿಯ ಆಂತರಿಕ ವಿಷಯ, ಸಮಸ್ಯೆಗಳ ಮೂಲಕ ಬಿಎಸ್​ವೈ ಅವರನ್ನು ಹಿಡಿತದಲ್ಲಿಟ್ಟುಕೊಳ್ಳಲು ಐಟಿ ದಾಳಿ ಮಾಡಿಸಿರಬಹುದು ಎಂದಿದ್ದರು.

ರಾಜ್ಯಾದ್ಯಂತ ಗುರುವಾರ ಮತ್ತು ಶುಕ್ರವಾರ ನಡೆದ ಆದಾಯ ತೆರಿಗೆ ದಾಳಿಗೆ ಆಂಧ್ರ ಮತ್ತು ಕರ್ನಾಟಕ ಗುತ್ತಿಗೆದಾರರ ಗಲಾಟೆ ಕಾರಣ ಎಂಬ ಮಾತು ಕೇಳಿ ಬಂದಿದೆ. ಎರಡು ನೀರಾವರಿ ನಿಗಮಗಳಲ್ಲಿ ಗುತ್ತಿಗೆ ಪಡೆಯಲು ಗಲಾಟೆ ನಡೆದಿತ್ತು. ಇತ್ತೀಚಿಗಿನ ಎಲ್ಲ ಗುತ್ತಿಗೆಗಳು ಆಂಧ್ರದವರ ಪಾಲಾಗುತ್ತಿತ್ತು. ಅವುಗಳ ಹಂಚಿಕೆ ವಿಚಾರದಲ್ಲಿ ಎ ಗ್ರೇಡ್ ಟೆಂಡರ್​ಗಳನ್ನು ಆಂಧ್ರ ಮೂಲದ ಕಂಟ್ರಾಕ್ಟರ್​ಗಳಿಗೆ ಕೊಡಿಸಲಾಗುತ್ತಿತ್ತು. ಹೀಗೆ ರಾಜಕೀಯ ಪ್ರಭಾವಿಗಳು ತಮಗೆ ಬೇಕಾದ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಿಸಿ ಕಳೆದ 2 ವರ್ಷದಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆಸಿರುವ ಆರೋಪ ಕೇಳಿ ಬಂದಿದೆ.

ನೀರಾವರಿ ಯೋಜನೆಗಳ ಟೆಂಡರ್ ಅವ್ಯವಹಾರದಲ್ಲಿ ಶಾಮೀಲಾದ ಆಂಧ್ರ ಮೂಲದ ಗುತ್ತಿಗೆದಾರರು, ಪ್ರಭಾವಿ ರಾಜಕಾರಣಿಗಳ ಆಪ್ತರು ಸೇರಿ ಇನ್ನಿತರರಿಗೆ ತೆರಿಗೆ ವಂಚಿಸಲು ಸಹಕರಿಸಿದ ಆರೋಪದ ಮೇಲೆ 6ಕ್ಕೂ ಅಧಿಕ ಚಾರ್ಟೆಡ್ ಅಕೌಂಟೆಂಟ್​ಗಳ ಮನೆ ಮೇಲೆ ಗುರುವಾರ ಐಟಿ ತಂಡ ದಾಳಿ ನಡೆಸಿ ಪರಿಶೀಲಿಸಿತ್ತು. ಮುಂದುವರಿದ ಭಾಗವಾಗಿ ಶುಕ್ರವಾರವೂ ಪರಿಶೀಲನೆ ನಡೆದಿದೆ.