ಪುತ್ತೂರು ಗ್ರಾಮಾಂತರ: ಕರ್ನಾಟಕ-ಕೇರಳ ಗಡಿ ಪ್ರದೇಶವಾದ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖ ಎಂಬಲ್ಲಿ ಕಾಲಿನ ಭಾಗಕ್ಕಾದ ಗಾಯದಿಂದಾಗಿ ಮೂಳೆ ಮುರಿತಕ್ಕೊಳಗಾಗಿ ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನಿಗೆ ಸಂಪ್ಯ ಠಾಣೆಯ ಎಸ್‌ಐ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಗಾಳಿಮುಖದಲ್ಲಿ ರಸ್ತೆ ಬದಿಯಲ್ಲಿ ಸೋಮವಾರ ಸಂಜೆ ಕಾಲಿನ ಭಾಗಕ್ಕೆ ಗಂಭೀರ ಗಾಯವಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಕಂಡು ಬಂದಿದ್ದರು. ಗಸ್ತು ನಿರತರಾಗಿದ್ದ ಸಂಪ್ಯ ಠಾಣೆಯ ಎಸ್‌ಐ ಜಂಬೂರಾಜ್ ಮಹಾಜನ್ ಅವರು ಬಳಿಗೆ ಹೋಗಿ ವಿಚಾರಿಸಿದಾಗ ಯಾರೋ ಒಬ್ಬರು ತನ್ನನ್ನು ದೂಡಿ ಹಾಕಿ ಗಾಯಗೊಳಿಸಿರುವುದಾಗಿ ತಿಳಿಸಿದ್ದರು. ಗಾಯಗೊಂಡ ವ್ಯಕ್ತಿ ಕೇರಳದ ಮುಳಿಯಡ್ಕ ನಿವಾಸಿ ನಾಗೇಶ್ ಎಂಬ ಮಾಹಿತಿ ಸಿಕ್ಕಿತ್ತು. ಕೂಡಲೇ ಎಸ್‌ಐ ಜಂಬೂರಾಜ್ ಮಹಾಜನ್ ಇಲಾಖಾ ಜೀಪಿನಲ್ಲಿದ್ದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿದ್ದ ಔಷಧ ಬಳಸಿಕೊಂಡು ಗಾಯಾಳು ನಾಗೇಶ್ ಅವರಿಗೆ ಜತೆಗಿದ್ದ ಸಿಬ್ಬಂದಿ ಶರಣಪ್ಪ, ಯುವರಾಜ್ ಅವರ ಸಹಕಾರದೊಂದಿಗೆ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಗಾಯಾಳು ನಾಗೇಶ್ ಅವರನ್ನು ಈಶ್ವರಮಂಗಲದ ಕ್ಲಿನಿಕ್ ಒಂದಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಹಿನ್ನೆಲೆಯಲ್ಲಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸುವ ಕೆಲಸ ಮಾಡಿದ್ದಾರೆ. ನಾಗೇಶ್ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.