ಜಿಲ್ಲೆ

ನಿಂತಿದ್ದ ಅಟೋ ಮೇಲೆಯೇ ಬಿತ್ತು ಬೃಹತ್​ ಗಾತ್ರದ ಮರ: ಇಬ್ಬರಿಗೆ ಗಂಭೀರ ಗಾಯ, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹಾಸನ: ರಸ್ತೆ ಬದಿ ನಿಂತಿದ್ದ ಆಟೋವೊಂದರ ಮೇಲೆ ಬೃಹತ್​ ಗಾತ್ರದ ಮರ ಏಕಾ ಏಕಿ ಉರುಳಿಬಿದ್ದಿದ್ದು, ಇಬ್ಬರು ಗಾಯಗೊಂಡಿದ್ದು,ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾಸನ ನಗರದ ಕೆ.ಆರ್.ಪುರಂ 3ನೇ ಅಡ್ಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು,ಮರ ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮರ ಬಿದ್ದ ಪರಿಣಾಮ ಆಟೋ, ಒಂದು ಕಾರು ಸಂಪೂರ್ಣ ಜಖಂಗೊಂಡಿದ್ದು, ಜಬೀನಾ, ಜುನೈದ್‌ ಎಂಬುವವರು ಗಾಯಗೊಂಡಿದ್ದಾರೆ.

ಚಿಕ್ಕಮಗಳೂರಿನಿಂದ ಸ್ಕ್ಯಾನಿಂಗ್ ಮಾಡಿಸಲು ಬಂದಿದ ಜುನೈದ್ ಕುಟುಂಬ ಸ್ಕ್ಯಾನಿಂಗ್ ಸೆಂಟರ್ ಎದುರು ಆಟೋದಲ್ಲಿ ಕುಳಿತು ಕಾಯುತ್ತಿರುವಾಗ ಏಕಾಏಕಿ ಮರಬಿದ್ದಿದೆ.

ಗಾಯಾಳುಗಳ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಸಗರಸಭೆ ಅಧ್ಯಕ್ಷ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಬೀಳುವಂತಿರುವ ಬೃಹತ್ ಗಾತ್ರದ ಮರಗಳನ್ನು ಗುರುತಿಸಿಲ್ಲ ಏಕೆ ಎಂದು ಅರಣ್ಯ ಇಲಾಖೆ ಅಧಿಕಾರಿಯನ್ನು ನಗರಸಭೆ ಅಧ್ಯಕ್ಷ ಮೋಹನ್‌ಕುಮಾರ್ ತರಾಟೆಗೆ ತೆಗೆದುಕೊಂಡರು.(ದಿಗ್ವಿಜಯ ನ್ಯೂಸ್​)