ಯಳಂದೂರು: ತಾಲೂಕಿನ ಸೋಲಿಗರ ಆರಾಧ್ಯ ದೈವ, ಬಿಳಿಗಿರಿರಂಗನಾಥಸ್ವಾಮಿ ನೆಲೆಸಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೊಡ್ಡ ತೇರಿನ ಉತ್ಸವ ವಿಜೃಂಭಣೆಯಿಂದ ನಡೆಯಿತು.
ತೇರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಥದ ಹಗ್ಗವನ್ನು ಗೋವಿಂದ ನಾಮಸ್ಮರಣೆಯೊಂದಿಗೆ ಸಾವಿರಾರು ಭಕ್ತರು ಎಳೆದು ಪುನೀತರಾದರು.
ಮುಂಜಾನೆ 5 ಗಂಟೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನ ಆರಂಭವಾಯಿತು. ಮೊದಲಿಗೆ ಕಲ್ಯಾಣೋತ್ಸವ ನೆರವೇರಿದ ನಂತರ ಪ್ರಸ್ಥಾನ ಮಂಟಪಗಳನ್ನು ಅಲಂಕಾರ ಮಾಡಲಾಯಿತು. ದೇವರನ್ನು ತುಳಸಿ ಸೇರಿದಂತೆ ವಿವಿಧ ಬಣ್ಣಬಣ್ಣದ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
10.43 ರಿಂದ 11.08 ಗಂಟೆೆ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ದೇವರ ಉತ್ಸವ ಮೂರ್ತಿಯನ್ನು ತೇರಿನೊಳಗೆ ಇರಿಸಲಾಯಿತು. ಸಾವಿರಾರು ಭಕ್ತರು ತೇರು ಎಳೆದು ಭಕ್ತಿ ಸಮರ್ಪಿಸಿದರು. ತೇರನ್ನು ಎಳೆಯುತ್ತಿದ್ದಂತೆ ಭಕ್ತರು ಹಾಡಿದ ಗೋವಿಂದ ನಾಮಾವಳಿ ಎಲ್ಲೆಡೆ ಪಸರಿಸಿತು. ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಪೋಡುಗಳಿಂದ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೋಲಿಗರು ಆಗಮಿಸಿದರು.
ಹಣ್ಣು -ದವನ ಎಸೆದ ಭಕ್ತರು: ನೂತನ ದಂಪತಿ ಸೇರಿದಂತೆ ಎಲ್ಲರೂ ಹಣ್ಣು ದವನವನ್ನು ತೇರಿಗೆ ಎಸೆಯುವ ಮೂಲಕ ಹರಕೆ ತೀರಿಸಿದರು. ನವದಂಪತಿಗಳು, ಹರಕೆ ಹೊತ್ತಿದ್ದ ಅನೇಕ ಭಕ್ತರು ಧಾರ್ಮಿಕ ವಿಧಿಯನ್ನು ತೀರಿಸಿದರು. ಜತೆಗೆ ಧೂಪ ಹಾಕುವ ಮೂಲಕ ಭಕ್ತಿ ಮೆರೆದರು.
ಭರ್ಜರಿ ವ್ಯಾಪಾರ
ರಥದ ಬೀದಿಯಲ್ಲಿ ನೂರಾರು ವರ್ತಕರು ಅಂಗಡಿ ತೆರೆದಿದ್ದರು. ಸಿಹಿತಿಂಡಿ, ಪುರಿಖಾರ, ಮಕ್ಕಳ ಆಟಿಕೆ ಸಾಮಾನುಗಳು, ದಿನಬಳಕೆ ವಸ್ತುಗಳ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು. ಅಲ್ಲಲ್ಲಿ ಇರುವ ಮಂಟಪಗಳಲ್ಲಿ ಹರಕೆ ಹೊತ್ತ ಭಕ್ತರು ನೀರುಮಜ್ಜಿಗೆ, ಪಾನಕ, ಕೋಸಂಬರಿ ಹಾಗೂ ವಿವಿಧ ತಿಂಡಿ ವಿತರಿಸಿದರು.
ತೇರಿನ ನಂತರ ಮಂಟಪೋತ್ಸವ: ರಥಧಲ್ಲಿ ಕುಳ್ಳಿರಿಸಿದ್ದ ಉತ್ಸವ ಮೂರ್ತಿಯನ್ನು ವಿವಿಧ ಚಿನ್ನಾಭರಣಗಳಿಂದ ಅಲಂಕರಿಸಲಾಗಿತ್ತು. ಹರಕೆ ಹೊತ್ತ ಭಕ್ತರು ಮಂಟಪಗಳಲ್ಲಿ ದೇವರ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಿದರು. ದೇವರಿಗೆ ಚಿನ್ನಾಭರಣ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ಭಕ್ತರು ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರ ದರ್ಶನ ಪಡೆದರು. ಬೆಂಗಳೂರು, ಮೈಸೂರು, ಮಂಡ್ಯ ಕೊಳ್ಳೇಗಾಲ, ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು, ನರಸೀಪುರ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಭಕ್ತರಿಗೆ ಕಿರಿಕಿರಿ: ತೇರು ಮುಗಿಯುತ್ತಿದ್ದಂತೆಯೇ ಬಸ್‌ಹತ್ತಲು ಹಾಗೂ ದೂರದಲ್ಲಿ ನಿಲ್ಲಿಸಿದ್ದ ವಾಹನಗಳತ್ತ ತೆರಳಲು ಭಕ್ತರು ಪರದಾಡುವಂತಾಯಿತು. ಪೊಲೀಸರು ಬ್ಯಾರಿಕ್ಯಾಡ್‌ಗಳನ್ನು ಹಾಕಿದ್ದರಿಂದ ಕೆಲಕಾಲ ವಾಗ್ವಾದ ನಡೆಯಿತು. ಬಸ್ ಹತ್ತುವ ಜನರನ್ನು ಹತ್ತಿಸಲು ಸರತಿ ಸಾಲಿನಲ್ಲಿ ಕಳುಹಿಸುವ ಉದ್ದೇಶದಿಂದ ಬ್ಯಾರಿಕ್ಯಾಡ್ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ಸಮಜಾಯಿಷಿ ನೀಡುತ್ತಿದ್ದರು. ಆದರೆ ನೂರಾರು ಸಂಖ್ಯೆಯಲ್ಲಿ ಜನರು ಸ್ವಂತ ವಾಹನಗಳಲ್ಲಿ ಬಂದಿದ್ದರಿಂದ ವಾಹನಗಳ ಬಳಿಗೆ ನಡೆದು ಹೋಗಲು ಪೊಲೀಸರು ತಡೆಯೊಡ್ಡುತ್ತಿದ್ದ ಹಿನ್ನೆಲೆಯಲ್ಲಿ ಭಕ್ತರಿಗೆ ಆಕ್ರೋಶ ಮತ್ತಷ್ಟು ಹೆಚ್ಚಾಗಿತ್ತು. ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ದ್ವಿಚಕ್ರ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು.