ಜಿಲ್ಲೆ

26ಕ್ಕೆ ಸಾಗರದಲ್ಲಿ ಬೃಹತ್ ಶೋಭಾಯಾತ್ರೆ

ಸಾಗರ: ವಿಶ್ವ ಹಿಂದು ಪರಿಷತ್‌ನ 60ನೇ ವರ್ಷಾಚರಣೆ ನಿಮಿತ್ತ ವಿಎಚ್‌ಪಿ ಮತ್ತು ಬಜರಂಗದಳದಿಂದ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಎಚ್‌ಪಿ ಜಿಲ್ಲಾಧ್ಯಕ್ಷೆ ಪ್ರತಿಮಾ ಸತೀಶ್ ಜೋಗಿ ಹೇಳಿದರು.

ರಥಯಾತ್ರೆಯನ್ನು ಸೆ.26ರ ಸಂಜೆ 4ಕ್ಕೆ ಸೊರಬ ರಸ್ತೆಯಲ್ಲಿ ಸ್ವಾಗತಿಸಲಾಗುವುದು. ನಂತರ ಶ್ರೀ ಮಹಾಗಣಪತಿ ದೇವಸ್ಥಾನದಿಂದ 5 ಗಂಟೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ನಂತರ ಗಾಂಧಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಬಜರಂಗದಳದ ಸಂಯೋಜಕ ಸಂತೋಷ್ ಶಿವಾಜಿ ಮಾತನಾಡಿ, ರಥಯಾತ್ರೆಯು ಸೆ.25ರಂದು ಚಿತ್ರದುರ್ಗದಿಂದ ಹೊರಟು ದಾವಣಗೆರೆ, ಹೊನ್ನಾಳಿ ಮೂಲಕ ಸೆ.26ರಂದು ಶಿಕಾರಿಪುರ ಪ್ರವೇಶಿಸಲಿದೆ. ಅಲ್ಲಿ ಸಭಾ ಕಾರ್ಯಕ್ರಮದ ನಂತರ ಸೊರಬ ಮೂಲಕ ಸಂಜೆ 4ಕ್ಕೆ ಸಾಗರ ಪ್ರವೇಶಿಸಲಿದೆ ಎಂದು ತಿಳಿಸಿದರು.
ತಾಳಗುಪ್ಪ ಕೂಡ್ಲಿಮಠದ ಶ್ರೀ ಸಿದ್ಧವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮುಖ್ಯ ಭಾಷಣ ಮಾಡುವರು. ವಿಎಚ್‌ಪಿ ಜಿಲ್ಲಾಧ್ಯಕ್ಷೆ ಪ್ರತಿಮಾ ಸತೀಶ್ ಜೋಗಿ ಅಧ್ಯಕ್ಷತೆ ವಹಿಸುವರು. ವಿಎಚ್‌ಪಿ ದಕ್ಷಿಣ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಕೆ.ಆರ್.ಸುನೀಲ್, ವಿಭಾಗ ಸಂಯೋಜಕ ರಾಜೇಶ್ ಗೌಡ ಉಪಸ್ಥಿತರಿರುವರು ಎಂದರು.