ಜಿಲ್ಲೆ

ಕಾಫಿ ತೋಟದಲ್ಲಿ ಆನೆಗಳ ಭಾರಿ ಹಿಂಡು

ಸಕಲೇಶಪುರ: ತಾಲೂಕಿನ ಮಠಸಾಗರ ಗ್ರಾಮ ಸಮೀಪದ ಸನ್ ವ್ಯಾಲಿ ಕಾಫಿ ಎಸ್ಟೇಟ್‌ನಲ್ಲಿ ಹಾಡಹಗಲೇ ಕಾಡಾನೆ ಹಿಂಡು ಕಾಣಿಸಿಕೊಂಡು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.

ಆನೆಗಳ ಹಿಂಡು ರಾತ್ರಿ ವೇಳೆ ಸಂಚರಿಸುವುದು ಸಾಮಾನ್ಯ. ಆದರೆ, ಮಠಸಾಗರ ಮತ್ತು ಬಾಗೇ ಸಮೀಪದ ಸನ್ ವ್ಯಾಲಿ ಹಾಗೂ ಟಾಟಾ ಸಮೂಹದ ಕಾಫಿ ತೋಟಗಳಲ್ಲಿ ಎರಡು ದಿನಗಳಿಂದ ಮದ ಗಜಗಳು ಕಾದಾಡುವ ದೃಶ್ಯ ಕಂಡುಬಂದಿದೆ. ಭಾನುವಾರ ಮುಂಜಾನೆ ಮಠಸಾಗರ ಸಮೀಪದ ಕಾಫಿ ಎಸ್ಟೇಟ್‌ನಲ್ಲಿ 60 ಕಾಡಾನೆಗಳು ಕೆರೆಯಲ್ಲಿ ನೀರು ಕುಡಿಯಲು ಇಳಿದಿದ್ದು, ಪರಸ್ಪರ ಚಿನ್ನಾಟ ಹಾಗೂ ಕಾದಾಟ ನಡೆಸುವ ಮೂಲಕ ಬಹುತೇಕ ಕಾಫಿ ತೋಟವನ್ನೇ ನಾಶ ಮಾಡಿವೆ. ಸಂಜೆವರೆಗೂ ಕಾಡಾನೆಗಳ ಚಲನವಲನ ಗಮನಿಸಿ, ನಂತರ ಹೇಮಾವತಿ ನದಿ ದಾಟಿಸಲಾಗುವುದು ಎಂದು ಆರ್‌ಎಫ್‌ಒ ರವೀಂದ್ರ ತಿಳಿಸಿದ್ದಾರೆ.

ಪ್ರತಿರೋಧ: ಬೃಹತ್ ಸಂಖ್ಯೆಯಲ್ಲಿರುವ ಕಾಡಾನೆಗಳನ್ನು ಹೇಮಾವತಿ ನದಿಯಿಂದ ದಾಟಿಸಿದರೆ ಕೊಣ್ಣೂರು, ಇಬ್ಬಡಿ, ಸುಳ್ಳಕ್ಕಿ ಗ್ರಾಮಗಳಿಗೆ ಲಗ್ಗೆ ಇಡಲಿವೆ. ಈ ಗ್ರಾಮಗಳಲ್ಲಿ ಬಹುತೇಕರು ಸಣ್ಣ ಕಾಫಿ ಹಿಡುವಳಿದಾರರಿದ್ದು, ಭಾರಿ ಸಂಖ್ಯೆಯ ಗಜಗಳು ಈ ಪ್ರದೇಶಕ್ಕೆ ನುಗ್ಗಿದರೆ ಅವರ ಕಾಫಿ ತೋಟ ಸಂಪೂರ್ಣ ನಾಶವಾಗಲಿವೆ ಎಂಬ ಆತಂಕ ಶುರುವಾಗಿದೆ.

ಧರಣೀಶ್, ಕಾಫಿ ಬೆಳೆಗಾರಮ ಇಬ್ಬಡಿ ಗ್ರಾಮ

ಮಠಸಾಗರ, ಬಾಗೆ ಗ್ರಾಮಗಳ ಸುತ್ತಮುತ್ತ ವಿವಿಧ ಕಂಪನಿಗಳಿಗೆ ಸೇರಿದ ನೂರಾರು ಎಕರೆ ಕಾಫಿ ತೋಟಗಳಿವೆ. ಅಲ್ಲಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹೇಮಾವತಿ ನದಿ ದಾಟಿಸಿದರೆ, ಈ ಭಾಗದಲ್ಲಿರುವ ಸಣ್ಣಪುಟ್ಟ ಕಾಫಿ ಬೆಳೆಗಾರರು ಸರ್ವನಾಶವಾಗಲಿದ್ದಾರೆ.