ಕೈಲಾಂಚ: ಹೋಬಳಿಯ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ದಾಸರಹಳ್ಳಿಯ ದೈತಮ್ಮ ದೇವಾಲಯದ ಆವರಣದಲ್ಲಿದ್ದ ಬೃಹತ್ ಅರಳೀಮರ ಶನಿವಾರ ಮಧ್ಯಾಹ್ನ ಉರುಳಿಬಿದ್ದು ಮನೆ, ಆಟೋ, ವಿದ್ಯುತ್ ಕಂಬಗಳು ಹಾನಿಯಾಗಿದೆ. ಶನಿವಾರ ಇದ್ದಕ್ಕಿದ್ದಂತೆ ಬೃಹತ್ ಅರಳೀಮರ ಉರುಳಿಬಿದ್ದಿದ್ದು, ಬಿದ್ದ ರಭಸಕ್ಕೆ ಪುಟ್ಟಸ್ವಾಮಯ್ಯ ಎಂಬುವರ ಮನೆ ಹಾನಿಯಾಗಿದೆ. ಜತೆಗೆ ವಿದ್ಯುತ್ ತಂತಿ ಮೇಲೆ ಮರ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಉರುಳಿಬಿದ್ದವು. ಮರಬಿದ್ದ ಸ್ಥಳದಿಂದ ದೂರವಿದ್ದ ಮನೆ ಮುಂದೆ ನಿಲ್ಲಿಸಿದ್ದ ಆಟೋ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದು ಆಟೋ ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.